ಕೊಪ್ಪಳ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಮೇಘರಾಜ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ, ಗ್ರಾಮ ಪಂಚಾಯಿತಿ ಚುನಾವಣೆಯ ಕೊಪ್ಪಳ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆ ನಡೆಸಿದ್ದು, ಇದಕ್ಕೆ ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದಲ್ಲಿರುವವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರಿಗೆ ತಿಳಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯವರು ಜನರಿಗೆ ಒಳ್ಳೆಯದಾಗುವ ಯಾವುದೇ ಕೆಲಸ ಮಾಡುವುದಿಲ್ಲ. ಜನರ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ರೈತರ ಬಗ್ಗೆ ಕಾಳಜಿಯೇ ಇಲ್ಲ. ಅವರಿಗೆ ಬರೀ ಗೋಹತ್ಯೆ ಕಾಯ್ದೆ, ಲವ್ ಜಿಹಾದ್ ಕಾಯ್ದೆ ಮುಖ್ಯವಾಗಿವೆ. ಜನರ ನಡುವೆ ಜಗಳ ಹಚ್ಚುವ ಕೆಲಸ ಮಾಡ್ತಾರೆ. ಬಿಜೆಪಿ ಪಕ್ಷ ಮಾಡುತ್ತಿರುವ ಸರ್ವಾಧಿಕಾರಿ ಧೋರಣೆಯನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನರಿಗೆ ತಿಳಿಸಬೇಕು. ಈ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿಯ ಒಡೆದಾಳುವ ನೀತಿಯನ್ನು ಅರಿತುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಬೇಕು ಎಂದು ಕರೆ ನೀಡಿದರು.