ಕೊಪ್ಪಳ : ಈಜುಕೊಳದಲ್ಲಿ ಈಜಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಫೋಟೋ ವೈರಲ್ ಆಗಿರೋದನ್ನು ನೋಡಿದರೆ ಬಿಜೆಪಿಯವರು ಎಷ್ಟು ಬೇಜವಾಬ್ದಾರಿ ಇದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯ ಇಂತಹ ಸಂದರ್ಭದಲ್ಲಿ ಹಗಲು-ರಾತ್ರಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಚಿವರೇ ಈಜುಗೊಳದಲ್ಲಿ ಈಜಾಡಿದ ಫೋಟೋವನ್ನು ಟ್ವಿಟರ್‌ಗೆ ಹಾಕಿಕೊಂಡಿದ್ದಾರೆ. ಇದು ನಿಜಕ್ಕೂ ದುರಂತ.
ಬಿಜೆಪಿಯ ಒಬ್ಬ ಶಾಸಕರು ಬರ್ತ್ಡೇ ಪಾರ್ಟಿ ಮಾಡ್ತಾರೆ. ಮತ್ತೊಬ್ಬರು ಗುಂಡಿಕ್ಕಿ ಕೊಲ್ಲಿ ಎನ್ನುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಅವರನ್ನು ಕಂಟ್ರೋಲ್ ಮಾಡಲು ಆಗದೆ ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದೆನಿಸುತ್ತದೆ. ಸದ್ಯದ ಪರಸ್ಥಿತಿಯಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆ ಬಹಳ ಪ್ರಮುಖ. ಈ ಎರಡೂ ಇಲಾಖೆಯ ಸಚಿವರಿಗೆ ಈಗ ಕೆಲಸ ಮಾಡಲು ಒಳ್ಳೆಯ ಅವಕಾಶವಿದೆ.
ಆರೋಗ್ಯ ಮತ್ತು ವೈದ್ಯಕೀಯ ಈ ಎರಡು ಇಲಾಖೆಗಳ ಸಚಿವರು ಒಬ್ಬರಿಗೊಬ್ಬರು ಮುಖವನ್ನು ನೋಡುತ್ತಿಲ್ಲ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರು ಒಂದು ಸೂಚನೆ ನೀಡಿದರೆ ಎಲ್ಲಾ ಶಾಸಕರು, ಸಚಿವರು ಕಟ್ಟುನಿಟ್ಟಾಗಿ ಆದೇಶ ಪಾಲಿಸುತ್ತಿದ್ದೆವು ಎಂದು ರಾಜ್ಯ ಬಿಜೆಪಿ ವಿರುದ್ದ ಕೆಂಡ ಕಾರಿದರು.