ಕೊಪ್ಪಳ: ಬಿಜೆಪಿಯವರು ನಾಲೆಗೆ ನೀರು ಬಿಡುವ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದು, ಈ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ.
ಕಾರಟಗಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬಳಿಕ ಮಾತನಾಡಿದ ಅವರು, ನಾಲೆಗೆ ನೀರು ಬಿಡುವ ಕುರಿತಾಗಿ ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಅಸ್ಪಷ್ಟವಾಗಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ನಾವು ಪ್ರತಿಭಟನೆ ಮಾಡುವ ಮೂಲಕ ಏಪ್ರಿಲ್ 30ರವರೆಗೂ ನೀರು ಹರಿಸಬೇಕೆಂದು ಒತ್ತಾಯಿಸಿದ್ದೇವೆ ಎಂದರು.
ಈ ಭಾಗದ ಬಿಜೆಪಿ ಮುಖಂಡರು ಚುನಾವಣೆಯಲ್ಲಿ ಜನರಿಗೆ ಸುಳ್ಳು ಹೇಳುವಂತೆಯೇ ನೀರು ಬಿಡುವ ವಿಚಾರದಲ್ಲಿಯೂ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಏಪ್ರಿಲ್ 10ರವರೆಗೂ ನೀರು ಹರಿಸುವ ಕುರಿತಂತೆ ಒಂದು ಆದೇಶ ಪ್ರತಿಯು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಆ ಆದೇಶ ಪ್ರತಿಗೆ ಸಹಿಯೂ ಇಲ್ಲ, ದಿನಾಂಕವಿಲ್ಲ. ಇದೊಂದು ಫೇಕ್ ಆದೇಶ ಪ್ರತಿಯಾಗಿದೆ ಎಂದರು. ಆ ಪ್ರತಿಯು ಯಾರಿಂದ ಹೋಗಿದೆ ಎಂಬುದು ನನಗೆ ಗೊತ್ತು. ಈ ಬಗ್ಗೆ ನಾನು ದೂರು ನೀಡುತ್ತೇನೆ. ಏಪ್ರಿಲ್ 30ರವರೆಗೆ ನಾಲೆಗಳಿಗೆ ನೀರು ಹರಿಸಬೇಕು. ಅದು 3500 ಕ್ಯೂಸೆಕ್ನಂತೆ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸಬೇಕು ಎಂದು ಶಿವರಾಜ ತಂಗಡಗಿ ಆಗ್ರಹಿಸಿದರು.