ಕುಷ್ಟಗಿ (ಕೊಪ್ಪಳ): ಸಮುದಾಯದ ಮೀಸಲಾತಿಯ ಹೋರಾಟದ ನೇತೃತ್ವವನ್ನು ಮಠಾಧೀಶರು ವಹಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದರು.
ಕುಷ್ಟಗಿ ಪಟ್ಟಣದ ಹಳೆಬಜಾರ್ನಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮೀಸಲಾತಿ ಎಂಬುದು ದಲಿತರು, ಶೋಷಿತರು ಸೇರಿದಂತೆ ಎಲ್ಲಾ ರೀತಿ ಹಿಂದುಳಿದವರು ಅರ್ಹರಿಗೆ ಸಿಗುವ ವ್ಯವಸ್ಥೆಯಾಗಿದೆ.
ಈ ಮೀಸಲಾತಿಯನ್ನು ಬಲಾಢ್ಯ ಸಮುದಾಯದವರು ಆಕ್ರಮಣಕಾರಿಯಾಗಿ ಪಡೆಯಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಬಲಿಷ್ಠರೆ ಶೋಷಿತರ ಹಕ್ಕು ಕಸಿದುಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಶೋಷಿತರ ಪರವಾಗಿದ್ದರು. ಈಗಿನ ಮಠಾಧೀಶರು ಬಲಿಷ್ಠರ ಪರವಾಗಿ ನಿಲ್ಲುವುದು ಸರಿ ಅಲ್ಲ ಎಂದರು. ದೇಶವನ್ನು ಪ್ರೀತಿಸುವ ಕೋಟ್ಯಂತರ ಯುವತಿಯರ ಪ್ರತಿನಿಧಿ ದಿಶಾ ರವಿ. ಆಕೆಯ ಪರಿಸರ ಹೋರಾಟದ ಬಗ್ಗೆ ಅಭಿಮಾನ, ಪ್ರೀತಿ ಇದೆ.
ಈ ಟೂಲ್ ಕಿಟ್, ಹಾಳುಮೂಳು ಇದಕ್ಕೆಲ್ಲ ಬಂಧಿಸಿರುವುದು ಫ್ಯಾಸಿಜಂನ ಇನ್ನೊಂದು ಮುಖ ಎಂದರು. ಎಲ್ಲಿ ಪ್ರಶ್ನಿಸುವುದು ಇರುವುದಿಲ್ಲವೋ ಅಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ಪ್ರಶ್ನಿಸಿದರೆ ಮಾತ್ರ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.