ಕೊಪ್ಪಳ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಏನೇ ಕ್ರಮ ಕೈಗೊಂಡರು ಜನರು ಕೂಡ ಎಚ್ಚೆತ್ತುಕೊಳ್ಳಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಣ ಮಾಡಬಹುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಬಳ್ಳಾರಿಗೆ ತೆರಳುವ ಮಾರ್ಗಮಧ್ಯದಲ್ಲಿ ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಕೊರೊನಾ ಕರ್ಫ್ಯೂ ನಿಯಮಗಳಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಸೇರಿಸಿ ಲಾಕ್ಡೌನ್ ಮುಂದುವರೆಸಲಾಗುತ್ತಿದೆ. ಸರ್ಕಾರ ಏನೇ ಮಾಡಿದರೂ, ಎಷ್ಟೇ ನಿರ್ಬಂಧ ಹೇರಿದರೂ ಜನರು ಸಹ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಸ್ವಯಂ ನಿರ್ಬಂಧವೊಂದೇ ಕೊರೊನಾ ನಿಯಂತ್ರಣ ಮಾಡಲು ಇರುವ ಮಾರ್ಗವಾಗಿದೆ. ನಾಗರಿಕರು ಜ್ವರ ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. 10 ದಿನ ಬಿಟ್ಟು ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದ ಸಾವು ನೋವು ಆಗುತ್ತದೆ. ಕೊರೊನಾ ವಿಷಯದಲ್ಲಿ ಪ್ರತಿಪಕ್ಷ ರಾಜಕಾರಣ ಮಾಡಬಾರದು. ಏನಾದರೂ ಸಲಹೆಗಳು ಇದ್ದರೆ ಹೇಳಲಿ. ಬೆಳಗ್ಗೆಯಿಂದ ಸಂಜೆಯವರೆಗೂ ಟೀಕೆ ಮಾಡಿದರೆ ಏನೂ ಆಗೋದಿಲ್ಲ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಬಳ್ಳಾರಿಯ ಜಿಂದಾಲ್ಗೆ ಭೇಟಿ ನೀಡಲು ಹೊರಟಿದ್ದೇನೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಈ ಭಾಗದಲ್ಲಿರುವ ಆಕ್ಸಿಜನ್ ಪ್ಲಾಂಟ್ಗಳು ಸ್ಥಗಿತಗೊಂಡಿದ್ದರೆ ಅವುಗಳನ್ನು ಆರಂಭಿಸುವ, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ಭಾಗದಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲ. ಆದರೆ ಉತ್ಪಾದನೆಯನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು. ಸಂಸದ ಸಂಗಣ್ಣ ಕರಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.