ಕುಷ್ಟಗಿ (ಕೊಪ್ಪಳ): ಸ್ವಯಂ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರ ಸಹಾಯಕ್ಕೆ ನೆರವಾಗುವ ಪಿಆರ್ಗಳಿಗೆ ನಿಗದಿಪಡಿಸಿರುವ ಗೌರವ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ತಹಶೀಲ್ದಾರ್ ಎಂ.ಸಿದ್ದೇಶ್ ತಿಳಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಸ್ವಯಂ ಬೆಳೆ ಸಮೀಕ್ಷೆಯ ತ್ವರಿತ ಕಾರ್ಯಕ್ಕೆ ನಿಯೋಜಿಸಿದ ಪಿಆರ್ಗಳಿಗೆ ಮಾಹಿತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪಿಆರ್ಗಳಿಗೆ 400 ಪ್ಲಾಟ್ ನಿಗದಿಯಾಗಿದೆ. ಪ್ಲಾಟ್ಗೆ ನಿಗದಿಪಡಿಸಿದ ಗೌರವಧನವನ್ನು ನೇರವಾಗಿ ಪಿಆರ್ಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ಪಿಆರ್ಗಳು ರೈತರಿಗೆ ಸ್ವಯಂ ಬೆಳೆ ಸಮೀಕ್ಷೆಯಿಂದಾಗುವ ಲಾಭಗಳ ಕುರಿತು ಮಾಹಿತಿ ನೀಡಬೇಕು. ರೈತರಿಗೆ ಮೊಬೈಲ್ ಆ್ಯಪ್ ಡೌನಲೋಡ್, ಮಿಶ್ರ ಬೆಳೆಯ ಗೊಂದಲ ಸರಿಪಡಿಸಿದರೆ ಈ ಮುಂಗಾರಿನ ಈ ಟಾಸ್ಕ್ ಕೊನೆಗೊಳ್ಳಲಿದೆ.
ತಾಲೂಕಿನಲ್ಲಿ1 ಲಕ್ಷದ 5 ಸಾವಿರ ಪ್ಲಾಟ್ಗಳಿದ್ದು, ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಿಆರ್ಗಳು ಮನಸ್ಸು ಮಾಡಿದರೆ ವಾರದಲ್ಲಿ ಪೂರ್ಣಗೊಳಿಸುವ ಸಾದ್ಯತೆಗಳಿವೆ. ಗಣೇಶ ಹಬ್ಬದ ರಜೆಗೆ ಬಂದಿರುವವರು ಗಣೇಶೋತ್ಸವ ಆಚರಿಸುವ ಜೊತೆಗೆ ಬೆಳೆ ಸಮೀಕ್ಷೆಯ ಉತ್ಸವ ಆಚರಿಸಬೇಕೆಂದು ಕರೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಅವರು, ಕುಷ್ಟಗಿ ತಾಲೂಕಿನಲ್ಲಿ 8 ಸಾವಿರ ಪ್ಲಾಟ್ಗಳ ಸಮೀಕ್ಷೆ ನಡೆಸಲಾಗಿದೆ ಎಂದರು.