ಕೊಪ್ಪಳ: ನಿನ್ನೆ ಸೀಗೆ ಹುಣ್ಣಿಮೆ. ಅಂದರೆ ಭೂದೇವಿಯ ಹಬ್ಬ. ಈ ಸೀಗೆ ಹುಣ್ಣಿಮೆಯನ್ನು ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ.
ಈ ದಿನ ಒಡಲು ತುಂಬಿಕೊಂಡಿರುವ ಭೂಮಿಗೆ ರೈತರು ಸಂಭ್ರಮದಿಂದ ಸೀಮಂತ ಮಾಡುತ್ತಾರೆ. ಇಡೀ ಕುಟುಂಬಸ್ಥರು, ನೆಂಟರಿಷ್ಟರು ಸೇರಿ ಭೂದೇವಿಯನ್ನು ಪೂಜಿಸುವ ಪದ್ಧತಿ ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿದೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಯು ಈಗ ತೆನೆ ತುಂಬಿಕೊಂಡು ನಲಿಯುತ್ತಿರುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರಿಗೆ ಸೀಮಂತ ಮಾಡುವುದು ವಾಡಿಕೆ. ಅದರಂತೆ ಸೀಗೆ ಹುಣ್ಣಿಮೆಯಂದು ರೈತರು ಪೈರಿನಿಂದ ಒಡಲು ತುಂಬಿಕೊಂಡ ಭೂದೇವಿಗೂ ಸೀಮಂತ ಕಾರ್ಯ ಮಾಡುತ್ತಾರೆ.
ಇದನ್ನೂ ಓದಿ: ಬೆಳಗಾವಿ: ದೇಗುಲ ಜಾಗದ ವಿಚಾರವಾಗಿ ಎರಡು ಕೋಮುಗಳ ಘರ್ಷಣೆ; ನಾಲ್ವರು ಗಂಭೀರ
ಬೆಳೆಗೆ ಹಾಗೂ ತಮ್ಮ ಹೊಲದಲ್ಲಿರುವ ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಬಗೆಬಗೆ ಅಡುಗೆ ಮಾಡಿ ಬಂಧು ಬಳಗ, ಸ್ನೇಹಿತರು ಎಲ್ಲರೂ ಸೇರಿ ಒಂದೆಡೆ ಕುಳಿತು ಊಟ ಮಾಡುತ್ತಾರೆ. ಅದರಂತೆ, ಕೊಪ್ಪಳ ಜಿಲ್ಲೆಯ ಹಲವೆಡೆ ರೈತರು ಸಂಭ್ರಮದಿಂದ ಸೀಗೆ ಹುಣ್ಣಿಮೆ ಆಚರಿಸಿದರು.