ಗಂಗಾವತಿ (ಕೊಪ್ಪಳ) : ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಕೇವಲ ಭಾರತ ಮಾತ್ರವಲ್ಲ, ಇಡೀ ವಿಶ್ವದ ಗಮನ ಸೆಳೆದಿದೆ. ಜನವರಿ 22ರಂದು ಲೋಕಾರ್ಪಣೆಯಾಗಲಿರುವ ರಾಮ ಮಂದಿರಕ್ಕಾಗಿ ರಾಮನ ಭಕ್ತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದರಲ್ಲೂ ಮಂದಿರ ನಿರ್ಮಾಣದ ಕಾರ್ಯಕ್ಕೆಂದು ತೆರಳಿದ್ದ ಗಂಗಾವತಿ ಶಿಲ್ಪಿ ಪ್ರಶಾಂತ ಸೋನಾರ್ ಅಲ್ಲಿನ ಆ ದಿನಗಳು ಹೇಗಿದ್ದವು ಎಂಬುದರ ಬಗ್ಗೆ ಮೆಲಕು ಹಾಕಿದ್ದಾರೆ.
ಬಿಗಿ ಬಂದೋಬಸ್ತ್ನಲ್ಲಿ ಕೆಲಸ : ಅಯೋಧ್ಯೆಯ ರಾಮ ಮಂದಿರದಲ್ಲಿನ ಹೊರಾಂಗಣದ ಸ್ತಂಭ, ಶಿಲಾ ಕೃತಿಗಳ ಕೆತ್ತನೆ ಕಾರ್ಯದಲ್ಲಿ ಸುಮಾರು 45 ದಿನಗಳನ್ನು ಕಳೆದಿರುವ ಗಂಗಾವತಿಯ ಶಿಲ್ಪ ಕಲಾವಿದ ಪ್ರಶಾಂತ್ ಸೋನಾರ್ ಅದೊಂದು ಅದ್ಭುತ ಅನುಭವ ಎಂದು ಹೇಳಿಕೊಳ್ಳುತ್ತಾರೆ. ಬೆಳಗ್ಗೆ ಎಂಟು ಗಂಟೆಗೆ ಶುರುವಾಗುತ್ತಿದ್ದ ಕೆಲಸ, ಸಂಜೆ ಆರು ಗಂಟೆಗೆ ಮುಗಿಯುತ್ತಿತ್ತು. ಅತ್ಯಂತ ಬಿಗಿ ಭದ್ರತೆಯಲ್ಲಿ ನಾವು ಕೆಲಸ ಮಾಡಬೇಕಿತ್ತು. ಮುಖ್ಯವಾಗಿ ನಮಗೆ ಕೊಟ್ಟ ಕೆಲಸವನ್ನಷ್ಟೇ ಮಾಡಬೇಕಿತ್ತು. ನಮ್ಮ ತಂಡದ ಸದಸ್ಯರನ್ನು ಹೊರತುಪಡಿಸಿದರೆ ಬೇರೆ ಗುಂಪಿನೊಂದಿಗೆ ಪರಸ್ಪರ ಮಾತುಕತೆಗೆ ಆಸ್ಪದ ಇರುತ್ತಿರಲಿಲ್ಲ.
ಮುಖ್ಯವಾಗಿ ನಾವು ಮಾಡುವ ಕೆಲಸದ ತಾಣಕ್ಕೆ ಮೊಬೈಲ್ಗಳನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ. ಅನಗತ್ಯ ಯಾರೊಂದಿಗೆ ಮಾತನಾಡುವಂತಿರಲಿಲ್ಲ. ಇದರಿಂದಾಗಿ ಕೆಲಸದಲ್ಲಿ ಶ್ರದ್ಧೆ ಮೂಡಲು ಪ್ರೇರೇಪಿಸಿದಂತಾಗುತ್ತಿತ್ತು. ಊಟ, ವಸತಿ ಸಮೇತ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ವಿವರಿಸಿದರು.
ಗೌಪ್ಯಸ್ಥಳದಲ್ಲಿ ಮೂಲ ವಿಗ್ರಹ ಕೆತ್ತನೆ : ಮೈಸೂರು ಮೂಲದ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದಾರೆ. ಭದ್ರತೆ ಮತ್ತು ರಕ್ಷಣೆಯ ವಿಚಾರಕ್ಕಾಗಿ ರಾಮಲಲ್ಲಾ ವಿಗ್ರಹದ ಕೆತ್ತನೆಯು, ಅಯೋಧ್ಯೆಯ ಮೂಲ ದೇವಸ್ಥಾನದಿಂದ 5 ಕಿಲೋ ಮೀಟರ್ ಅಂತರದಲ್ಲಿರುವ ಗೌಪ್ಯ ಸ್ಥಳದಲ್ಲಿ ಮಾಡಲಾಗುತಿತ್ತು. ಕಲಾವಿದ ಅರುಣ್ ಯೋಗಿರಾಜ್ ಅವರಿಗೆ ಭದ್ರತೆ ಕಲ್ಪಿಸಲಾಗಿತ್ತು ಎಂದು ಸೋನಾರ್ ತಿಳಿಸಿದರು.
ಪೂರ್ವ ಜನ್ಮದ ಸುಕೃತ : 500 ವರ್ಷಗಳ ಕಾಲದ ಹಿಂದೂಗಳ ಸತತ ತಪಸ್ಸು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮೂಲಕ ಈಡೇರಲಿದೆ. ಈ ಪುಣ್ಯದ ಕಾರ್ಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತದ ಫಲ. ಅಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ಸಿಕ್ಕಿರುವ ಸಂಭಾವನೆಗಿಂತ, ಪವಿತ್ರ ತಾಣದಲ್ಲಿ ಮಾಡಿದ ಕೆಲಸದ ಆತ್ಮತೃಪ್ತಿ ನನ್ನ ಜೀವಿತಾವಧಿಯುದ್ದಕ್ಕೂ ಹಚ್ಚಹಸಿರಾಗಿರಲಿದೆ. ರಾಮ ಮಂದಿರ ಲೋಕಾರ್ಪಣೆಯನ್ನು ಜನ ಹೇಗೆ ನಿರೀಕ್ಷಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ನಾನಂತೂ ಅತ್ಯಂತ ಸಂಭ್ರಮದಿಂದ ಕಣ್ತುಂಬಿಕೊಳ್ಳಲು ಕಾತರನಾಗಿದ್ದೇನೆ ಎಂದು ಪ್ರಶಾಂತ್ ಸೋನಾರ್ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ರಾಮಲಲ್ಲಾ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ : ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ಮತ್ತು ತಾಯಿಯ ಸಂದರ್ಶನ