ಕೊಪ್ಪಳ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿದೆ. ವೇಳಾಪಟ್ಟಿ ಘೋಷಣೆಗೂ ಮುನ್ನವೇ ಮತದಾರರನ್ನು ಸೆಳೆಯಲು ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೀರೆ ಉಡುಗೊರೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಟೀಕಿಸಿದೆ.
ವಿವರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಸ್ವಕ್ಷೇತ್ರ ಯಲಬುರ್ಗಾದ ಹಳ್ಳಿ ಹಳ್ಳಿಗಳಲ್ಲಿ ಸೀರೆ ಹಂಚಿಕೆ ಮಾಡುತ್ತಿದ್ದಾರೆ. ಯಲಬುರ್ಗಾ ಶಾಸಕರೂ ಆಗಿರುವ ಆಚಾರ್ ಫೋಟೋ ಇರುವ ಚೀಲದಲ್ಲಿ ಸೀರೆ ಇಟ್ಟು ಹಂಚಿಕೆ ಮಾಡಲಾಗುತ್ತಿದೆ. ಸೀರೆ ಇರುವ ಚೀಲದ ಮೇಲೆ ಅಳಿಯ ಬಸವರಾಜ ಅವರ ಅಡ್ಡ ಹೆಸರು ಗೌರ ಹಾಗೂ ಅದರ ಕೆಳಗೆ ಹಾಲಪ್ಪ ಆಚಾರ್ ಫೋಟೋ ಇದ್ದು, ಫೋಟೋ ಕೆಳಗೆ ಜಲಯಜ್ಞ ಅಂತಾ ಪ್ರಿಂಟ್ ಮಾಡಲಾಗಿದೆ ಎನ್ನುವುದು ಕಾಂಗ್ರೆಸ್ ಆರೋಪ.
ವ್ಯಾಪಕ ಟೀಕೆ: ಹಾಲಪ್ಪ ಆಚಾರ್ ಹೆಸರಲ್ಲಿ ಸೀರೆ ಹಂಚಿಕೆ ಮಾಡುವ ವಿಡಿಯೋಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ವ್ಯಾಪಕ ಟೀಕೆ ಮಾಡುತ್ತಿದ್ದಾರೆ. ಅಳಿಯ-ಮಾವ ಸೇರಿ ಕೇವಲ 60 ರೂಪಾಯಿಯ ಸೀರೆ ಹಂಚಿ ಮತ ಸೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಸಚಿವ ಹಾಲಪ್ಪ ಸ್ಪಷ್ಟನೆ: ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್, ಹುಟ್ಟುಹಬ್ಬಕ್ಕೆ ಅಥವಾ ಯಾವುದಾದರೂ ಒಳ್ಳೆ ಕೆಲಸಕ್ಕೆ ಪಕ್ಷದ ಅಭಿಮಾನಿಗಳು ಸೀರೆ ಹಂಚುತ್ತಾರೆ. ಅದನ್ನು ಚುನಾವಣೆಗೆ ಲಿಂಕ್ ಮಾಡಿದರೆ ನಾನೇನು ಮಾಡಲಿ?. ಕೊಟ್ಟಿಲ್ಲ ಅಂತ ನಾನು ವಾದ ಮಾಡುವುದಿಲ್ಲ. ನಾನು ಕೊಟ್ಟಿಲ್ಲ, ಅಭಿಮಾನಿಗಳು ಕೊಟ್ಟಿದ್ದು. ಅದು ಅಭಿಮಾನದಿಂದ ಕೊಟ್ಟಿರುತ್ತಾರೆ. ನನ್ನ ಕ್ಷೇತ್ರದಲ್ಲಿ ನಾನು ಶಿಕ್ಷಣ ಮತ್ತು ನೀರಿನ ವಿಷಯವನ್ನು ಇಟ್ಟುಕೊಂಡು ಮತಯಾಚನೆ ಮಾಡಿದ್ದೆ. ನಾವು ಮಾಡಿದ ಕೆಲಸವನ್ನು ಪ್ರತಿರೋಧ ಮಾಡುವವರು ಈ ರೀತಿ ಆರೋಪ ಮಾಡುತ್ತಾರೆ. ಅದರ ಹೊರತಾಗಿ ಇದರಲ್ಲಿ ಯಾವುದೇ ಹುರುಳಿಲ್ಲ. ಸೀರೆ ಹಂಚೋಕೆ ನಮ್ಮ ಕಾರ್ಯಕರ್ತರು ಯಾರೂ ಹೋಗಿಲ್ಲ. ಎಲ್ಲೋ ನಾಲ್ಕು ಮನೆಗಳಿಗೆ ಅಭಿಮಾನಿಗಳು ಸೀರೆ ಹಂಚಿದ್ದನ್ನು ಇಡೀ ಕ್ಷೇತ್ರಕ್ಕೆ ಹೊರಿಸೋದು ಬೇಡ ಎಂದರು.
ಬಿಜೆಪಿ ಟೀಕೆ: ಕಳೆದ ತಿಂಗಳು, ಕಾಂಗ್ರೆಸ್ ನಡೆಸುತ್ತಿದ್ದ ಪ್ರಜಾಧ್ವನಿ ರಥಯಾತ್ರೆಗೆ ಜನ ಸೇರಿಸಲು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಮಹಿಳೆಯರಿಗೆ ಸೀರೆ ಹಾಗೂ ಮೊಬೈಲ್ ಹಂಚಿ ಆಮಿಷ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆರೋಪಿಸಿದ್ದರು. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಹೆಸರಿನಲ್ಲಿ ರಥಯಾತ್ರೆ ನಡೆಸಿ, ಜನರಿಗೆ ಹಣ ಸುರಿಯುತ್ತಿದ್ದಾರೆ ಎಂದು ಹೇಳಿದ್ದರು.
ಸಿಪಿ ಯೋಗೇಶ್ವರ ವಿರುದ್ಧ ಹೆಚ್ಡಿಕೆ ವಾಗ್ದಾಳಿ: ನಾಲ್ಕು ಅವಧಿಗೆ ಶಾಸಕರಾಗಿದ್ದವರು ಈ ಬಾರಿ ಮತ್ತೆ ಶಾಸಕರಾಗಲು ಸೀರೆ ಹಂಚುತ್ತಿದ್ದಾರೆ. ನಾಲ್ಕು ಅವಧಿಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಿದ್ದರೆ ಈ ಬಾರಿ ಚನ್ನಪಟ್ಟಣದಲ್ಲಿ ಸ್ವಾಭಿಮಾನಿ ನಡಿಗೆ ಹೆಸರಲ್ಲಿ ಸೀರೆ ಹಂಚಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ವಿರುದ್ಧ ರಾಮನಗರದಲ್ಲಿ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಕರ್ನಾಟಕದ 800 ಹಳ್ಳಿಗಳಿಗೆ ಮಹಾಸರ್ಕಾರದ ಸಹಾಯ, ಇದು ಚುನಾವಣೆ ಗಿಮಿಕ್: ಡಿಕೆಶಿ ಆರೋಪ.