ಗಂಗಾವತಿ(ಕೊಪ್ಪಳ): ಕೇವಲ ಎರಡುವರೆ ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ. ಇದರಿಂದ ಕಲಿಯುಗದ ಕುಡುಕರ ಗ್ರಾಮ ಎಂಬ ಕಳಂಕ ಇದಕ್ಕೆ ಎದುರಾಗಿದ್ದು, ಈ ಬಗ್ಗೆ ಅಕ್ರಮ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಗಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಗರದ ಹೊಸಳ್ಳಿ ರಸ್ತೆಯ ಬೈಪಾಸ್ನಲ್ಲಿರುವ ಅಬಕಾರಿ ಇಲಾಖೆಗೆ ಭೇಟಿ ನೀಡಿದ ಗ್ರಾಮಸ್ಥರು, ಗ್ರಾಮದಲ್ಲಿರುವ ಅನಧಿಕೃತ ಮದ್ಯದಂಗಡಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಯುವಕರು, ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಗ್ರಾಮದಲ್ಲಿರುವ ಒಂದು ಅಂಗಡಿಯಿಂದ ಕೆಲ ರಾಜಕೀಯ ಪ್ರೇರಿತ ವ್ಯಕ್ತಿಗಳು ಸುತ್ತಲಿನ ಹತ್ತಾರು ಗ್ರಾಮಗಳಿಗೆ ಅನಧಿಕೃತವಾಗಿ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ನಕಲಿ ಮದ್ಯ ಸರಬರಾಜಾಗುವ ಆತಂಕ ಇದ್ದು, ಕೂಡಲೇ ಜನರ ಆರೋಗ್ಯ ಮತ್ತು ಗ್ರಾಮದ ಸ್ವಾಸ್ಥ್ಯ ಕಾಪಾಡುವ ಉದ್ದೇಶಕ್ಕೆ ಅಕ್ರಮ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.