ಕೊಪ್ಪಳ: ಬಿಜೆಪಿ ಸಂಸದರಿಗೆ ಸೀರೆ, ಬಳೆ ಕಳಿಸುವುದಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ಶಿವರಾಜ ತಂಗಡಗಿ ನಾಲಿಗೆ ಬಿಗಿಹಿಡಿದುಕೊಂಡು ಮಾತನಾಡಲಿ ಎಂದು ಸಂಸದ ಸಂಗಣ್ಣ ಕರಡಿ ತಾಕೀತು ಮಾಡಿದ್ದಾರೆ.
ಕೊಪ್ಪಳದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರಿಗೆ ಸೀರೆ, ಬಳೆ, ಕುಂಕುಮ ಕಳಿಸುತ್ತೇನೆ ಎಂದು ಹೇಳುವ ಮೂಲಕ ಶಿವರಾಜ ತಂಗಡಗಿ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ. ಸೀರೆ, ಬಳೆ ಅರ್ಥವನ್ನು ಅವರು ತಿಳಿದುಕೊಂಡಿಲ್ಲ. ತಾಕತ್ತಿನ ಬಗ್ಗೆ ತಂಗಡಗಿ ಅನೇಕ ಬಾರಿ ಮಾತನಾಡುತ್ತಾರೆ. ಆ ತಾಕತ್ತು ಅಂದ್ರೆ ಏನು ಎಂದು ನಮಗೆ ಅರ್ಥವಾಗುತ್ತಿಲ್ಲ. ತಾಕತ್ತು ಅವರೊಬ್ಬರಿಗೆ ಮಾತ್ರ ಇದೆಯಾ ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನೆ ಮಾಡಿದರು.
ನಾವು ಪ್ರಧಾನಿಯನ್ನು ಭೇಟಿ ಮಾಡಲು ತಂಗಡಗಿ ಕೇಳುವ ಅವಶ್ಯಕತೆ ಇಲ್ಲ. ಮೋದಿ ಅವರನ್ನು ಭೇಟಿಯಾಗಲು ನಮಗೆ ಸಂಪೂರ್ಣ ಸ್ವಾತಂತ್ರವಿದೆ. ತಂಗಡಗಿ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಇನ್ನು, ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವಲ್ಲಿ ಸ್ವಲ್ಪ ವಿಳಂಬವಾಗಿದೆ. ನಾವು ನೇರವಾಗಿ ಪರಿಹಾರ ಕೇಳುವುದಕ್ಕೆ ಆಗುವುದಿಲ್ಲ. ಅದಕ್ಕೊಂದು ನಿಯಮವಿದೆ, ಈಗಾಗಲೇ ಕೇಂದ್ರದಿಂದ ನೆರೆ ಬಗ್ಗೆ ಸಮೀಕ್ಷೆಯಾಗಿದೆ. ಕೇಂದ್ರದಿಂದ ಶೀಘ್ರದಲ್ಲಿ ಪರಿಹಾರದ ಹಣ ಬರುತ್ತದೆ. ಜೋಶಿ, ಸದಾನಂದಗೌಡ ಅವರು ಅಮಿತ್ ಶಾ ಹಾಗೂ ಮೋದಿಯನ್ನು ಭೇಟಿಯಾಗಿದ್ದಾರೆ. ರಾಜ್ಯಕ್ಕೆ ಬರಬೇಕಾದ ಪರಿಹಾರದ ಮೊತ್ತ ಬಂದೇ ಬರುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.