ಗಂಗಾವತಿ(ಕೊಪ್ಪಳ): ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕಳೆದ ಐದು ತಿಂಗಳಿಂದ ಸತತ ಗೈರಾಗಿದ್ದರೂ ಅವರ ಖಾತೆಗೆ ವೇತನ ಮಂಜೂರಾಗುತ್ತಿರುವ ಘಟನೆ ನಗರದ ಕನಕದಾಸ ವೃತ್ತದ ಸಮೀಪ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಒಂದರಿಂದ ಐದನೇ ತರಗತಿಯ ಈ ಶಾಲೆಯಲ್ಲಿ ಒಟ್ಟು 25ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣ ಸುಧಾರಣೆಯ ದೃಷ್ಟಿಯಿಂದ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಆದರೆ, ಬೆಟ್ಟದೇಶ್ವರ ಸೂಡಿ ಎಂಬ ಶಿಕ್ಷಕ ಕಳೆದ ಐದು ತಿಂಗಳಿಂದ ಶಾಲೆಗೆ ಹಾಜರಾಗಿಲ್ಲ. ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಿಸುವ ಚಿಂತನೆ ಅವರಿಗಿಲ್ಲ ಎಂದು ಮುಖ್ಯ ಶಿಕ್ಷಕಿ ಪ್ರಭಾವತಿ ಶಿಳ್ಳೇನ್ ಹೇಳಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕಿ ಈ ಬಗ್ಗೆ ಲಿಖಿತ ಪೂರ್ವಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಆದರೆ, ಶಿಕ್ಷಕನ ಖಾತೆಗೆ ವೇತನ ಬಟವಾಡೆಯಾಗುವುದು ಮಾತ್ರ ನಿಂತಿಲ್ಲ. ಕೆಲಸ ಮಾಡದೇ ವೇತನ ಪಾವತಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಾರಕ್ಕೊ ಹದಿನೈದು ದಿನಕ್ಕೊಮ್ಮೆ ಶಾಲಾ ಪರಿಸರದಲ್ಲಿ ಕಾಣ ಸಿಗುವ ಶಿಕ್ಷಕ, ಸಮೀಪದ ಪಾನ್ ಅಂಗಡಿ ಅಥವಾ ಟೀ ಸ್ಟಾಲ್ಗಳಲ್ಲಿ ಕಾಲ ಕಳೆದು ಮನೆಗೆ ಹೋಗುತ್ತಾರಂತೆ. ಈ ಬಗ್ಗೆ ಪ್ರಶ್ನಿಸಿದರೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ದೇಶದ ಏಕತೆಗೆ ಧಕ್ಕೆ ತರುವವರನ್ನು ಬಿಡುವುದಿಲ್ಲ - ಗೃಹ ಸಚಿವ