ಕೊಪ್ಪಳ: ಕೊಪ್ಪಳ ಅಂದ್ರೆ ಅಲ್ಲೇನಿದೆ, ಬರಿ ಉರಿಬಿಸಿಲು ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲಿನ ಸಾವಜಿ ಹೋಟೆಲ್ಗಳಲ್ಲಿ ಸಿಗುವ ಮಾಂಸಹಾರಿ ಊಟ ಸಖತ್ ಫೇಮಸ್ ಆಗಿದೆ.
ಹೌದು.., ಒಂದೊಂದು ತಿಂಡಿ ತಿನಿಸುಗಳಿಂದ ಒಂದೊಂದು ಊರುಗಳು ಪ್ರಸಿದ್ಧಿಯನ್ನು ಪಡೆದಿರುವಂತೆ ಜಿಲ್ಲೆಯಲ್ಲಿರುವ ಸಾವಜಿ ಹೋಟೆಲ್ಗಳ ಕೈರುಚಿಯು ನಾನ್ ವೆಜ್ ಪ್ರಿಯರ ನಾಲಿಗೆ ಮೇಲೆ ನೀರೂರುವಂತೆ ಮಾಡುತ್ತದೆ.
ಕೊಪ್ಪಳ, ಭಾಗ್ಯನಗರ, ಹನುಮಸಾಗರ, ಕುಕನೂರು, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಸಾವಜಿ ಹೋಟೆಲ್ಗಳು ಜಾಸ್ತಿ. ಈ ಹೋಟೆಲ್ಗಳು ಯಾವಾಗ ನೋಡಿದ್ರು ಗ್ರಾಹಕರಿಂದ ಫುಲ್ ಆಗಿರುತ್ತವೆ. ಅಂದಹಾಗೆ ಸಾವಜಿಗಳು ಅಂದರೆ ಸೋಮವಂಶ ಕ್ಷತ್ರಿಯ ಸಮುದಾಯದ ಜನರು. ಇವರನ್ನು ರೂಢಿ ಭಾಷೆಯಲ್ಲಿ ಇಲ್ಲಿ ಸಾವಜಿಗಳು ಎಂದು ಕರೆಯುತ್ತಾರೆ. ಸಾವಜಿಗಳ ಅಡುಗೆಯ ರುಚಿಯನ್ನು ಒಂದೇ ಒಂದು ಬಾರಿ ನೋಡಿದರೂ ಪದೇಪದೇ ಇವರ ಹೋಟೆಲ್ಗಳನ್ನು ಜನರು ಹುಡುಕಿಕೊಂಡು ಹೋಗುತ್ತಾರೆ. ಇಲ್ಲಿ ಚಿಕನ್, ಮಟನ್, ಫಿಶ್, ಎಗ್ನಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಸಾವಜಿಗಳ ಮಾಂಸಹಾರಿ ಅಡುಗೆಯ ರುಚಿ ಜಿಲ್ಲೆಯ ಬೇರೆ ಹೋಟೆಲ್ಳಲ್ಲಿ, ಡಾಬಾಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಇದಕ್ಕೆ ಮುಖ್ಯ ಕಾರಣ ನಾನ್ ವೆಜ್ ಅಡುಗೆಗೆ ಬೇಕಾದ ಎಲ್ಲ ಮಸಾಲೆ ಪದಾರ್ಥಗಳನ್ನು ಅವರೇ ತಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳುತ್ತಾರೆ. ಅವರ ಅಡಿಗೆಯಲ್ಲಿ ಒಂದು ರುಚಿ ಕಟ್ಟಿನ ಹಿಡಿತವಿದ್ದು, ಇದು ಬೇರೆ ಹೋಟೆಲ್ಗಳಲ್ಲಿ ಸಿಗುವುದಿಲ್ಲ ಅನ್ನೋದು ಪಕ್ಕಾ.
ನಾನ್ ವೆಜ್ ಊಟ ಸಿಗುವ ಬೇರೆ ಬೇರೆ ಹೋಟೆಲ್ಗಳು ಕೊಪ್ಪಳದಲ್ಲಿ ಸಾಕಷ್ಟಿದ್ದರೂ ಜನರು ಮಾತ್ರ ಸಾವಜಿ ಹೋಟೆಲ್ಗಳನ್ನು ಹುಡುಕಿಕೊಂಡು ಬರುತ್ತಾರೆ. ಇಲ್ಲಿ ಸಿಗುವ ಟೇಸ್ಟ್ ಬೇರೆ ಕಡೆ ಸಿಗುವುದಿಲ್ಲ, ಮನೆಯ ಊಟದಂತೆ ಇರುತ್ತದೆ. ದರವೂ ಅಂತಹ ದುಬಾರಿ ಇರೋದಿಲ್ಲ ಎನ್ನುತ್ತಾರೆ ಗ್ರಾಹಕ ಯಲ್ಲಪ್ಪ.