ಕುಷ್ಟಗಿ: ಈ ಪರೇಡ್ನಲ್ಲಿ ರೌಡಿ ಶೀಟರ್ಸ್, ಎಂ.ಓ.ಬಿಗಳು ವಯಸ್ಸಾದವರೆಂದು ಸಡಿಲಿಕೆ ಇಲ್ಲ. ವಯಸ್ಸಾಗಿದ್ದರೂ ಊರಲ್ಲಿ ಬೆಂಕಿ ಹಚ್ಚುವ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಅಂತವರಿಗೆ ವಿನಾಯಿತಿ ಇರುವುದಿಲ್ಲ. ನಡತೆಯಲ್ಲಿ ಬದಲಿಸಿಕೊಳ್ಳಬೇಕಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಹೇಳಿದರು.
ಕುಷ್ಟಗಿ ಸಿಪಿಐ ಕಚೇರಿಯ ಆವರಣದಲ್ಲಿ ಕುಷ್ಟಗಿ, ತಾವರಗೇರಾ, ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ನೂರಾರು ರೌಡಿಶೀಟರ್ಗಳ ಪರೇಡ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಯಸ್ಸಾದವವರಿಗೆ ನಡತೆ ಮುಖ್ಯ, ವಯಸ್ಸಲ್ಲ ಎಂದ ಅವರು, ಸಹಜವಾಗಿ ವಯಸ್ಸು ಜಾಸ್ತಿಯಾದವರ ಚಟುವಟಿಕೆ ಕಡಿಮೆಯಾಗಿರುತ್ತದೆ.
ಕೆಲವು ಪ್ರಕರಣದಲ್ಲಿ ವಯಸ್ಸಾದವರು ಅಪರಾಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಊರಲ್ಲಿ ತೊಂದರೆ ನೀಡುವ ಸ್ವಭಾವದವರಾಗಿದ್ದು, ಅಂಥವರಿಗೆ ಮುಲಾಜು ಇಲ್ಲ. ಅಂಥವರ ಮೇಲೆ ದಾಖಲೆ ಮುಂದುವರೆಸುತ್ತೇವೆ. ಅಂಥವರ ಮೇಲೆ ಪೊಲೀಸರು ಸದಾ ನಿಗಾವಹಿಸಿರುತ್ತಾರೆ. ಯುವಕರಾದವರು ಬುದ್ದಿ ತಿದ್ದಿಕೊಂಡು ತಮ್ಮ ನಡತೆ ಸುಧಾರಿಸಿಕೊಂಡಿದ್ದರೆ ಪರಿಶೀಲಿಸಿ ಪಟ್ಟಿಯನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದರು.
ಅಪರಾಧಿಗಳ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನೆಲೆಯ ವಸ್ತುನಿಷ್ಟ ಮಾಹಿತಿಯನ್ನು ಜಿಲ್ಲೆಯಲ್ಲಿ ಒಂದೇ ಚೌಕಟ್ಟಿನಲ್ಲಿ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕುಷ್ಟಗಿ ವೃತ್ತ ವ್ಯಾಪ್ತಿಯಲ್ಲಿ 267 ರೌಡಿ ಅಸಾಮಿಗಳು ಸ್ವತ್ತಿನ ಅಪರಾಧದಲ್ಲಿ ತೊಡಗಿರುವ (ಎಂ.ಒ.ಬಿ) ಹಿನ್ನಲೆಯ ಅಪರಾಧದಲ್ಲಿರುವ 118 ಜನರಿದ್ದಾರೆ.
ಅವರಲ್ಲಿ ಏನೂ ಸುಧಾರಣೆಯಾಗಿಲ್ಲ. ಈ ಹಿಂದೆ ಪ್ರಕರಣ ದಾಖಲಾದ ಸಮಯಕ್ಕೂ ಸದ್ಯ ಏನಾದರೂ ನಡತೆಯಲ್ಲಿ ಬದಲಾವಣೆಗಳ ಬಗ್ಗೆ ದಾಖಲೆಗಳನ್ನು ಮುಂದುವರಿಸಬೇಕೋ? ಪರಿಸಮಾಪ್ತಿಗೊಳಿಸಬೇಕೋ? ಸಮಾಲೋಚಿಸಿ ಕ್ರಮ ಜರುಗಿಸಲಾಗುತ್ತಿದೆ. ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್ಐ ತಿಮ್ಮಣ್ಣ ನಾಯಕ್, ತಾವರಗೇರಾ ಪಿಎಸ್ಐ ವೈಶಾಲಿ ಝಳಕಿ, ಕ್ರೈಂ ಪಿಎಸ್ಐ ಮಾನಪ್ಪ ವಾಲ್ಮೀಕಿ ಮತ್ತಿತರಿದ್ದರು.