ಗಂಗಾವತಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸುಮಾರು ಎಂಟು ಕೋಟಿ ರೂಪಾಯಿ ಮೊತ್ತದಲ್ಲಿ ಕೈಗೊಳ್ಳಲಾಗಿರುವ ಅರಸನಕೇರಿ ಕೊಡದಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ, ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಮಂಜೂರು ಮಾಡುತ್ತಿದೆ. ಹೀಗಾಗಿ ಅಗತ್ಯ ಸೌಕರ್ಯಗಳನ್ನು ಪಡೆದುಕೊಳ್ಳಲು ಜನ ಮುಂದೆ ಬರಬೇಕು ಎಂದರು.
ಗ್ರಾಮೀಣ ಭಾಗದ ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಸರ್ಕಾರ ನಾನಾ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಈ ಸವಲತ್ತುಗಳನ್ನು ಪಡೆದುಕೊಂಡು ಜನ ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಜನ ಮತ್ತು ವಾಹನ ಸಂಪರ್ಕ ಸುಲಭವಾಗಲಿ ಎಂಬ ಕಾರಣಕ್ಕೆ ವಿಶೇಷ ಯೋಜನೆಯಡಿ ಈ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಹೀಗಾಗಿ ಇದರ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಜನರಿಗೆ ಕರೆ ನೀಡಿದರು.