ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ಪುರಸಭೆ 5ನೇ ವಾರ್ಡ್ ವ್ಯಾಪ್ತಿಯ ಬಸ್ ನಿಲ್ದಾಣದ ಎದುರಿನ ಬನ್ನಿಕಟ್ಟೆಯಿಂದ ಸುಪ್ರೀಯಾ ಲಾಡ್ಜ್ವರೆಗೆ ರಸ್ತೆ ಡಾಂಬರೀಕರಣ ನನೆಗುದಿಗೆ ಬಿದ್ದಿರುವ ಕಾಮಗಾರಿ ಮರು ಟೆಂಡರ್ ಮೂಲಕ ಪೂರ್ಣಗೊಳಿಸುವಂತೆ ಸಾರ್ವಜನಿಕವಾಗಿ ಆಗ್ರಹ ವ್ಯಕ್ತವಾಗಿದೆ.
2018-19ನೇ ಶಾಸಕರ ಅನುದಾನದಡಿಯಲ್ಲಿ ಕಾಮಗಾರಿಯನ್ನು 5.80 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಗುತ್ತಿಗೆದಾರ ವಿನೋದ ಕುರ್ನಾಳ ವಹಿಸಿಕೊಂಡಿದ್ದು, ಅವರು ಬೇನಾಮಿ ಗುತ್ತಿಗೆದಾರರೊಬ್ಬರಿಗೆ ವಹಿಸಿದ್ದಾರೆ. ಈ ಕಾಮಗಾರಿ ಆರಂಭಿಸುವ ಮುನ್ನ ತೊಡಕಾಗಿದ್ದ ಅತಿಕ್ರಮ ಕಟ್ಟಡ ತೆರವುಗೊಳಿಸಿದ್ದರೂ, ಕಾಮಗಾರಿ ಆರಂಭಿಸಿಲ್ಲ.
ಇದರೊಂದಿಗೆ ಆರಂಭಿಸಿದ ಸಿಸಿ ಚರಂಡಿ ಕಾಮಗಾರಿ ಪೂರ್ಣಗೊಂಡಿದ್ದರೂ, ಈ ರಸ್ತೆಗೆ ಸುಧಾರಣೆ ಭಾಗ್ಯ ಮರೀಚೀಕೆಯಾಗುತ್ತಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ರಸ್ತೆಯ ತುಂಬೆಲ್ಲಾ ನೀರು ನಿಲ್ಲುತ್ತಿದ್ದು, ಜನ, ವಾಹನ ಸಂಚಾರಕ್ಕೆ ನಿತ್ಯ ತೊಂದರೆ ಅನುಭವಿಸುವಂತಾಗಿದ್ದು, ದಿನವಿಡೀ ಶಪಿಸುವಂತಾಗಿದೆ.
ಈ ಕುರಿತು ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಶಾಸಕರ ಅನುದಾನದಲ್ಲಿ ಈ ರಸ್ತೆ ಅಭಿವೃಧ್ಧಿ ನೆನೆಗುದಿಗೆಗೆ ಪುರಸಭೆ ಮುಖ್ಯಾಧಿಕಾರಿಗಳ ಮೃಧು ಧೋರಣೆ ಕಾರಣವಾಗಿದೆ. ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರೂ, ಮುಖ್ಯಾಧಿಕಾರಿ ಯಾವೂದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಕಾಮಗಾರಿಯನ್ನು ರದ್ದುಗೊಳಿಸಿ ಪುನಃ ಟೆಂಡರ್ ಕರೆದು ಪೂರ್ಣಗೊಳಿಸುವ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.