ಗಂಗಾವತಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಅರೆಬರೆ ಕಾಮಗಾರಿ ಮಾಡಿ ತಿಂಗಳು ಕಳೆದರೂ ಪೂರ್ಣಗೊಳಿಸದ್ದರಿಂದ ಬೇಸತ್ತ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ರಸ್ತೆ ರಿಪೇರಿ ಮಾಡಿಕೊಂಡ ಘಟನೆ ಕೇಸರಹಟ್ಟಿ ಗ್ರಾಮ ಪಂಚಾಯಿತಿಯ ಮುರಕುಂಬಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಪ್ರತಿ ಮನೆಮನೆಗೆ ಕುಡಿಯುವ ನೀರಿನ ನಲ್ಲಿಯ ಸಂಪರ್ಕ ಕಲ್ಪಿಸುವ ಉದ್ದೇಶಕ್ಕೆ ಸಿಮೆಂಟ್ ಕಾಂಕ್ರೀಟ್ನಿಂದ ಕೂಡಿದ್ದ ಮುಖ್ಯರಸ್ತೆ, ಓಣಿ ರಸ್ತೆಗಳನ್ನು ತೋಡಿ ಪೈಪ್ಲೈನ್ ಮಾಡಲಾಗಿತ್ತು. ಆದರೆ, ತೋಡಿದ ಗುಂಡಿಯನ್ನು ಹಾಗೆ ಬಿಡಲಾಗಿತ್ತು. ರಸ್ತೆ ದುರಸ್ತಿ ಕಾಣದ್ದರಿಂದ ಗ್ರಾಮದ ರಸ್ತೆಗಳೆಲ್ಲಾ ಹಾಳಾಗಿದ್ದು, ಮಕ್ಕಳು, ವೃದ್ಧರು, ರೋಗಿಗಳು ಮತ್ತು ಮಹಿಳೆಯರಿಗೆ ಓಡಾಡಲು ಸಮಸ್ಯೆಯಾಗಿತ್ತು. ಈ ಬಗ್ಗೆ ಗ್ರಾಮದ ಯುವಕರು ಸಂಬಂಧಿತ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರ ಗಮನ ಸೆಳೆದಿದ್ದರು.
ಆದರೆ, ಗ್ರಾಮದ ಯುವಕರ ಮಾತಿಗೆ ಮನ್ನಣೆ ಸಿಗದ ಹಿನ್ನೆಲೆ ಬೇಸತ್ತ ಯುವಕರು ತಾವೇ ಸ್ವಂತ ಹಣ ಹಾಕಿಕೊಂಡು ದುರಸ್ತಿಗೀಡಾದ ರಸ್ತೆಗೆ ಸಿಮೆಂಟ್ ಮಿಶ್ರಣ ಹಾಕುವ ಮೂಲಕ ರಸ್ತೆ ದುರಸ್ತಿ ಮಾಡಿಸಿಕೊಂಡರು.
ಓದಿ: ಶಿಕ್ಷಕ - ಪದವೀಧರ ಕ್ಷೇತ್ರದ ಚುನಾವಣೆ ಮತದಾನದ ಅವಧಿ ವಿಸ್ತರಿಸಿ: ಬಿಜೆಪಿ ಮನವಿ