ಕೊಪ್ಪಳ: ನಗರೀಕರಣ, ಕೈಗಾರೀಕರಣದಿಂದ ಜೀವಜಲ ಕಲುಷಿತಗೊಳ್ಳುತ್ತಿದೆ. ತ್ಯಾಜ್ಯ ನೀರನ್ನು ಸಂಸ್ಕರಿಸದೆ ಜಲಮೂಲಗಳಿಗೆ ಹರಿಸಲಾಗುತ್ತಿದೆ. ಭೂ ಮೇಲ್ಮೈ ಜಲದ ಜೊತೆಗೆ ಅಂತರ್ಜಲವೂ ವಿಷವಾಗುತ್ತಿದೆ.
ನಗರ, ಪಟ್ಟಣಗಳಲ್ಲಿ ಉತ್ಪತ್ತಿಯಾಗುವ ತಾಜ್ಯ ನೀರು ಸಂಸ್ಕರಣೆಯಾಗದೆ ತುಂಗಭದ್ರಾ ನದಿ, ಹಿರೇಹಳ್ಳ ಸೇರಿದಂತೆ ಜಲಮೂಲಗಳಿಗೆ ಸೇರುತ್ತಿದೆ. ನಿತ್ಯ ಸುಮಾರು 10 ಎಂಎಲ್ಡಿ ನೀರು ನಗರ ನಿವಾಸಿಗಳಿಗೆ ಸರಬರಾಜಾಗುತ್ತಿದೆ. ನಗರದಲ್ಲಿ ಪ್ರತಿದಿನ ಸುಮಾರು 6ರಿಂದ 8 ಎಂಎಲ್ಡಿ ತಾಜ್ಯ ನೀರು ಉತ್ಪತ್ತಿಯಾಗುತ್ತದೆ.
ಇದನ್ನೂ ಓದಿ...ಸ್ಟೋನ್ ಕ್ರಷರ್ ಘಟಕದಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ: ಮುರಗೋಡ ಪೊಲೀಸರಿಂದ ಆರೋಪಿಯ ಬಂಧನ
ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಕಲುಷಿತ ನೀರು ಶುದ್ಧೀಕರಣ ಘಟಕಗಳು ಇಲ್ಲ. ಜೊತೆಗೆ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಪೂರ್ಣವಾಗದೆ ನನೆಗುದಿಗೆ ಬಿದ್ದಿವೆ. ಹೀಗಾಗಿ, ನಗರದ ತಾಜ್ಯ ನೀರು ರಾಜಕಾಲುವೆ ಮೂಲಕ ಹಿರೇಹಳ್ಳ ಪ್ರವೇಶಿಸುತ್ತಿದೆ.
ಗಂಗಾವತಿ ನಗರದಲ್ಲೂ ಇದೇ ಪರಿಸ್ಥಿತಿ. ನಗರಸಭೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಗಂಗಾವತಿಗೆ ನಿತ್ಯ ಸುಮಾರು 16 ಎಂಎಲ್ಡಿ ನೀರು ಪೂರೈಕೆಯಾಗುತ್ತಿದ್ದು, ಅದರಲ್ಲಿ ಶೇ. 40ರಷ್ಟು ನೀರು ತ್ಯಾಜ್ಯವಾಗಿ ತುಂಗಭದ್ರಾ ನದಿಗೆ ಸೇರುತ್ತಿದೆ. ಇನ್ನು ಕೈಗಾರಿಕೆಗಳಿಂದ ಹೊರ ಬರುವ ತ್ಯಾಜ್ಯವೂ ಕೆರೆ, ಹಳ್ಳ-ಕೊಳ್ಳಗಳಿಗೆ ಸೇರುತ್ತಿದೆ. ಈ ಬಗ್ಗೆ ಗಮನ ನೀಡಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತಾಗಿದೆ.
ಮಂಡಳಿ ಕೊಪ್ಪಳದಲ್ಲಿ ಜೀವಂತವಾಗಿದೆಯೇ ಎಂದು ಪ್ರಶ್ನೆ ಮಾಡುವಂತಾಗಿದೆ. ಪರಿಸರ ಮಾಲಿನ್ಯವಾಗುತ್ತಿದ್ದರೂ ಕೈಗಾರಿಕೆ, ಸಂಸ್ಥೆಗಳ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡ ಉದಾಹರಣೆ ಈವರೆಗೂ ಕಂಡು ಬಂದಿಲ್ಲ ಎನ್ನುತ್ತಾರೆ ಪರಿಸರ ಪ್ರೇಮಿಗಳು.