ಕೊಪ್ಪಳ: ಸಿದ್ದಗಂಗಾ ಮಠದ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ಶಿವೈಕ್ಯರಾದ ಜನವರಿ 21ನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ತಾಲೂಕಿನ ಕೊಡದಾಳ ಗ್ರಾಮದ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶ್ರೀಮಠದ ಹಳೆಯ ವಿದ್ಯಾರ್ಥಿ ಶ್ರೀಶೈಲ ಮೇಟಿ, 12ನೇ ಶತಮಾನದಲ್ಲಿ ಬಸವಣ್ಣನವರು ದಾಸೋಹ ಪರಂಪರೆಗೆ ಮೇಲ್ಪಂಕ್ತಿ ಹಾಕಿದರು. ಅದರಂತೆ 21ನೇ ಶತಮಾನದಲ್ಲಿ ಸಿದ್ದಗಂಗೆಯ ಡಾ. ಶಿವಕುಮಾರ ಶ್ರೀಗಳು ಅಕ್ಷರ, ಅನ್ನ, ವಸತಿ ಹೀಗೆ ತ್ರಿವಿಧ ದಾಸೋಹ ಕಲ್ಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದವರು. ಇನ್ನು ಶ್ರೀಗಳ ಗೌರವಾರ್ಥವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವರಿ 21ನ್ನು ದಾಸೋಹ ದಿನವೆಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಕೊಡದಾಳ ಗ್ರಾಮದಲ್ಲಿ ಜನವರಿ 21ರಂದು ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ರಾತ್ರಿ ನವಲಗುಂದದ ಶ್ರೀ ಆಜಾತ ನಾಗಲಿಂಗ ಲೀಲೆ ಎಂಬ ನಾಟಕದ ಉಚಿತ ಪ್ರದರ್ಶನ ನಡೆಯಲಿದೆ ಎಂದು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ತಿಳಿಸಿದರು.
ಇನ್ನು ಶ್ರೀಮಠದ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಭಂಗಿ, ದೇವರಾಜ ವಟಪರವಿ, ದೇವರಾಜ ಹಳ್ಳಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.