ಕೊಪ್ಪಳ: ಇತ್ತೀಚೆಗೆ ನಡೆದ ಲೋಕಸಭೆ, ವಿಧಾನಸಭೆ ಉಪಚುನಾವಣೆ ಕರ್ತವ್ಯಕ್ಕೆ ಹೋಗಿ ಕೊರೊನಾ ಸೋಂಕಿಗೊಳಗಾಗಿ ಮೃತರಾದ ಶಿಕ್ಷಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಗನೌಡ ಪಾಟೀಲ್ ಹಲಗೇರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಉಪಚುನಾವಣೆ ವೇಳೆ ಕರ್ತವ್ಯಕ್ಕೆ ತೆರಳಿದ್ದ ಹಲವಾರು ಶಿಕ್ಷಕರು ಕೊರೊನಾ ಸೋಂಕಿಗೆ ಒಳಗಾಗಿ ಮೃತರಾಗಿದ್ದಾರೆ. ಇದು ನಿಜಕ್ಕೂ ದುಃಖಕರ ವಿಷಯ. ಅವರ ಕುಟುಂಬಗಳಿಗೆ ಆಸರೆ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರ ಮೃತ ಶಿಕ್ಷಕರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು ಎಂದರು.
ಚುನಾವಣೆ ಕರ್ತವ್ಯದಲ್ಲಿ ಮೃತರಾದ ಶಿಕ್ಷಕರು, ನೌಕರರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಇತ್ತೀಚೆಗೆ ಅಲಹಾಬಾದ್ ಕೋರ್ಟ್ ಆದೇಶ ಮಾಡಿದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಉಪಚುನಾವಣೆ ವೇಳೆ ಮೃತ ಶಿಕ್ಷಕರಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಆಗ್ರಹಿಸಿದ್ದಾರೆ.