ಕುಷ್ಟಗಿ : ತಾಲೂಕಿನ ಲಿಂಗದಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಶಿಕ್ಷಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಲಿಂಗದಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 55 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿದ್ದಾರೆ. ತಾವರಗೇರಾ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಬಸ್ ಸೌಕರ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಪಾಲಕರ ಮೋಟಾರ್ ಬೈಕ್ನಲ್ಲಿ ಕರೆದುಕೊಂಡು ಬರಲು ಸೂಚಿಸಿದ್ದಾರಂತೆ. ಲಿಂಗದಳ್ಳಿ, ವೀರಾಪೂರ, ಹಪಮ್ಮಿನಾಳ, ಹೊನಗಡ್ಡಿ, ಗುಡ್ಡದ ಹನುಮಸಾಗರದ ಕೆಲ ವಿದ್ಯಾರ್ಥಿಗಳಿಗೆ ಬೈಕ್ ಸೌಲಭ್ಯವಿಲ್ಲ. ಹಾಗಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳ ಇಂತಹ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ಸೇವೆ ಕಲ್ಪಿಸಬೇಕು. ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಬಾರದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಆಗ್ರಹಿಸಿದ್ದಾರೆ.