ಕೊಪ್ಪಳ : ರಾಜೀನಾಮೆ ನೀಡಿದ ಶಾಸಕರ ತ್ಯಾಗದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರ ಭಾವನೆಗೆ ಧಕ್ಕೆಯಾಗುವ ಹೇಳಿಕೆ ಕೊಡಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಅನರ್ಹ ಶಾಸಕರ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಗೌರವದಿಂದ ನಡೆದುಕೊಳ್ಳಬೇಕಿತ್ತು. ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಬಾರದಿತ್ತು. 17 ಶಾಸಕರ ರಾಜೀನಾಮೆಯ ತ್ಯಾಗವನ್ನು ಡಿಸಿಎಂ ಲಕ್ಷ್ಮಣ ಸವದಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದು 17 ಶಾಸಕರ ರಾಜೀನಾಮೆಯಿಂದ ಎಂಬುದನ್ನು ಮರೆಯಬಾರದು ಎಂದರು.
ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಡಿಸಿಎಂ ಆಗಿರುವುದು ಆಶ್ಚರ್ಯ ಹಾಗೂ ಅದ್ಭುತ. ಆದರೆ ಅದು ಪಕ್ಷದ ವರಿಷ್ಠರ ತೀರ್ಮಾನ. ಅದನ್ನು ನಾನು ಪ್ರಶ್ನೆ ಮಾಡೋಕೆ ಆಗಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧರಾತ್ರಿ ಕೊಡೆ ಹಿಡಿದಂತಾಗಿದೆ ಎಂದು ಪರೋಕ್ಷವಾಗಿ ಡಿಸಿಎಂ ಸವದಿ ಅವರನ್ನು ಕುಟುಕಿದರು.
ಸಿದ್ದರಾಮಯ್ಯ ವಿಪಕ್ಷದ ನಾಯಕರಾಗಲು 3 ತಿಂಗಳು ಕಾಯಬೇಕಾಯಿತು. ಕಾಡಿಬೇಡಿ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.