ಗಂಗಾವತಿ: ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ, ನದಿಯಲ್ಲಿ ಪ್ರವಾಹ ಉಂಟಾಗುವ ಮುನ್ಸೂಚನೆ ಹಿನ್ನೆಲೆ ನದಿಪಾತ್ರದ ಗ್ರಾಮಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸುಮಾರು ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಹರಿಸುತ್ತಿರುವ ಹಿನ್ನೆಲೆ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಜನ ಕೃಷಿ ಚಟುವಟಿಕೆ, ಬಟ್ಟೆ ತೊಳೆಯುವುದು, ಜಾನುವಾರುಗಳಿಗೆ ನೀರು ಕುಡಿಸಲು ನದಿಪಾತ್ರಕ್ಕೆ ಹೋಗದಂತೆ ಮತ್ತು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.
ಅಲ್ಲದೇ, ಈಗಾಗಲೇ ಕಂದಾಯ ಇಲಾಖೆಯಿಂದ ನದಿ ಪಾತ್ರದಲ್ಲಿರುವ ತಾಲೂಕಿನ ಸಣಾಪುರ, ಹನುಮನಹಳ್ಳಿ, ಆನೆಗುಂದಿ, ರಾಮದುರ್ಗ, ಸಂಗಾಪುರ, ಸಿಂಗನಗುಂಡ, ಹಿರೆಜಂತಕಲ್, ದೇವಘಾಟ, ಚಿಕ್ಕಜಂತಕಲ್, ಡಣಾಪುರ, ಮುಸ್ಟೂರು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಡಂಗೂರದ ಮೂಲಕ ಜಾಗೃತಿ ಮೂಡಿಸಲಾಗಿದೆ.
ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆ: ಪ್ರತಿವರ್ಷದಂತೆ ಈ ವರ್ಷವೂ ನದಿಗೆ ನೀರು ಬಂದಿದೆ. ಕಂಪ್ಲಿ- ಗಂಗಾವತಿ ಸೇತುವೆ ಮುಳುಗಿದೆ. ನದಿ ದಂಡೆಯ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತುಂಗಭದ್ರಾ ನದಿ ಪ್ರವಾಹ ಪೀಡಿತ ಕಂಪ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ಸಚಿವರು, ಹೊಸ ಸೇತುವೆ ನಿರ್ಮಾಣಕ್ಕೆ 79 ಕೋಟಿ ಮಂಜೂರಾತಿ ನೀಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಆದರೆ, ಸ್ಥಳೀಯ ಶಾಸಕ ಜೆ. ಎನ್ ಗಣೇಶ್ ತಿಳಿವಳಿಕೆ ಇಲ್ಲದೆ ಮಾತನಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ಮಾಡ್ಬೇಕು. ಹೊಸ ಸೇತುವೆ ನಿರ್ಮಾಣದ ಮೂಲಕ ಶಾಶ್ವತ ವ್ಯವಸ್ಥೆ ಕಲ್ಪಿಸುತ್ತೇವೆ ಎಂದರು.
ಕಂಪ್ಲಿ ಕೋಟೆ ಪ್ರದೇಶದ ಕೆಲ ಕುಟುಂಬಗಳು ಪ್ರತಿವರ್ಷ ಪ್ರವಾಹ ಪರಿಸ್ಥಿತಿ ಎದುರಿಸುತ್ತಾರೆ. ಆ ಕುಟುಂಬಗಳನ್ನು ಬೇರೆಡೆ ಶಿಫ್ಟ್ ಮಾಡುವ ಮೂಲಕ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಓದಿ: ಸರ್ಕಾರದಿಂದ ಯಾತ್ರಿಕರಿಗೆ ಸಹಾಯಧನ.. ಕಾಶಿ ಯಾತ್ರೆ ವೆಬ್ಸೈಟ್ಗೆ ಸಿಎಂ ಚಾಲನೆ