ಗಂಗಾವತಿ : ಹೊಲದಲ್ಲಿ ಕೆಲಸಕ್ಕೆ ತೆರಳಿದ್ದ ಅಪ್ರಾಪ್ತೆ ಮೇಲೆ ಕಣ್ಣಿಟ್ಟು ಆಕೆಯ ಮೇಲೆ ಬಲತ್ಕಾರ ಮಾಡಲು ಯತ್ನಿಸಿದ ಆರೋಪದ ಮೇಲೆ ತಾಲೂಕಿನ ಹೇರೂರು ಗ್ರಾಮದ ಯುವಕನೊಬ್ಬನ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಹುಲುಗಪ್ಪ ತಿಪ್ಪಣ್ಣ ತಿಪ್ಪಿಗುಂಡಿ ಎಂದು ಗುರುತಿಸಲಾಗಿದೆ. 16 ವರ್ಷದ ಅಪ್ರಾಪ್ತೆ, ಕುರಿಗಳಿಗೆ ಮೇವು ತರಲು ತೆರಳಿದ್ದಾರೆ. ಮೇವು ಕೊಯ್ದ ನಂತರ ಬಾಯಾರಿಕೆಯಾಗಿ ಹೊಲದಲ್ಲಿರುವ ನೀರು ಕುಡಿಯಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಆರೋಪಿ ಅಪ್ರಾಪ್ತೆಯ ಕೈಗಟ್ಟಿಯಾಗಿ ಹಿಡಿದುಕೊಂಡು ಸಮೀಪದಲ್ಲಿ ತೋಟದ ಮನೆಗೆ ಎಳೆದೊಯ್ದು ಮಲಗುವಂತೆ ಒತ್ತಾಯಿಸಿದ್ದಾನೆ.
ಆದರೆ, ಅಪ್ರಾಪ್ತೆ ಜೋರಾಗಿ ಕೂಗಾಡಿದ್ದರಿಂದ ಆರೋಪಿ ಗಾಬರಿಗೊಂಡು ಕೈ ಬಿಟ್ಟಿದ್ದಾನೆ. ಕೂಡಲೆ ಮನೆಗೆ ಬಂದು ವಿಷಯವನ್ನು ತಾಯಿ ಬಳಿ ಹೇಳಿದ ಅಪ್ರಾಪ್ತೆ, ಬಳಿಕ ಗ್ರಾಮದ ಕೆಲವರ ಸಹಕಾರದಿಂದ ಗಂಗಾವತಿ ಗ್ರಾಮೀಣ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.
