ಕುಷ್ಟಗಿ (ಕೊಪ್ಪಳ): ಡಾ. ರಾಜ್ ಕುಮಾರ್ ಅವರ ಆದರ್ಶ ಗುಣಗಳು ಪುನೀತ್ ರಾಜ್ಕುಮಾರ್ ಅವರಲ್ಲಿದ್ದವು. ಅವರ ಅಕಾಲಿಕ ನಿಧನ ಚಿತ್ರರಂಗ ಮತ್ತು ನಮ್ಮ ನಾಡಿಗೆ ತುಂಬಲಾರದ ನಷ್ಟ ಹೆಮ್ಮೆ ಎನಿಸುತ್ತಿದೆ ಎಂದು ಬಾಳೆಹೊನ್ನೂರಿನ ಶ್ರೀ ಮದ್ ರಂಭಾಪುರಿ ಜಗದ್ಗುರು ಡಾ. ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗಳ 7ನೇ ಪುಣ್ಯ ಸ್ಮರಣೋತ್ಸವದ ಧರ್ಮಸಭೆಗೆ ಆಗಮಿಸಿದ ವೇಳೆ 'ಈಟಿವಿ ಭಾರತ'ನೊಂದಿಗೆ ಮಾತನಾಡಿದ ಅವರು, ಡಾ. ರಾಜ್ಕುಮಾರ್ ಅವರ ಕಾಲದಲ್ಲೇ ಅಂದರೆ ಪುನೀತ್ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗ ಪ್ರವೇಶ ಮಾಡಿ, ಅದ್ಭುತ ನಟನೆಯಿಂದ ತಮ್ಮದೇ ಚಾಪು ಮೂಡಿಸಿದ್ದರು ಎಂದರು.
ಡಾ. ರಾಜ್ಕುಮಾರ ಕುಟುಂಬದ ತೃತೀಯ ಸುಪುತ್ರ ಪುನೀತ್ ರಾಜ್ಕುಮಾರ್ ಅವರು ಅನಿರೀಕ್ಷಿತವಾಗಿ ಅಗಲಿದ್ದಾರೆ. ಕಲಾ ಪ್ರಪಂಚ, ಸಿನಿಮಾ ರಂಗ ಹಾಗೂ ಸಾರ್ವಜನಿಕ ಇದರಿಂದ ಅಪಾರ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಕೇವಲ 46ನೇ ವಯಸ್ಸಿನಲ್ಲಿ ಎಲ್ಲ ಸಾಧನೆಗಳನ್ನು ಮಾಡಿ ಕಣ್ಮರೆಯಾಗಿದ್ದು, ಇಡೀ ಚಿತ್ರರಂಗಕ್ಕೆ ಅಚ್ಚರಿ ಜೊತೆಗೆ ದುಃಖಕ್ಕೆ ಕಾರಣವಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅವರು ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದರು. ಸಾರ್ವಜನಿಕ ಹಾಗೂ ಸೇವಾ ಕ್ಷೇತ್ರದಲ್ಲಿ ಅವರ ಕೊಡುಗೆ ಅಮೂಲ್ಯವಾಗಿದೆ. ಬಡವರ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ ಸಿನಿಮಾ ರಂಗದಲ್ಲಿ ಶ್ರಮಿಕ ಕಾರ್ಯಕರ್ತರ ಬಗ್ಗೆ, ಅವರು ಎಲ್ಲಿಲ್ಲದ ಅಭಿಮಾನ ಹೊಂದಿದ್ದರು.
ಇದನ್ನೂ ಓದಿ: ಯುವರತ್ನನ ನಿಧನಕ್ಕೆ ಮಂತ್ರಾಲಯದ ಸುಬುದೇಂಧ್ರ ಶ್ರೀ ಸಂತಾಪ
ಪುನೀತ್ ರಾಜ್ಕುಮಾರ್ ಅವರು ಇನ್ನೂ ಬದುಕಿ ಬಾಳಿ ಕಲಾ ಪ್ರಪಂಚಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕಿತ್ತು. ಅಗಲಿದ ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ಅನುಗ್ರಹಿಸಲಿ. ಅಗಲಿಕೆಯ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಆ ಭಗವಂತ ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದರು.