ಕೊಪ್ಪಳ : ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತ್ತಿರುವುದು ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಹೆಸರುಬೇಳೆ ಬಿತ್ತನೆ ಮಾಡಿದ ರೈತರು ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಳೆರಾಯ ಆರ್ಭಟಿಸುತ್ತಿಲ್ಲ. ಆದರೆ, ಆಗಾಗ ಸುರಿಯುತ್ತಿರುವ ಜಿಟಿಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಕಟಾವಿಗೆ ಬಂದಿದ್ದ ಹೆಸರು ಕಾಳಿನ ಬೆಳೆಗೆ ತೊಡಕನ್ನುಂಟಾಗಿದೆ. ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕುಕನೂರು ಹಾಗೂ ಯಲಬುರ್ಗಾ ತಾಲೂಕುಗಳು ಸೇರಿ ಜಿಲ್ಲೆಯ ಎರಿಭೂಮಿ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆ ಮಾಡಲಾಗಿದೆ.
ಈ ಹಿಂದೆ ಈ ಬೆಳೆಗೆ ಒಂದಿಷ್ಟು ಹಳದಿ ರೋಗಬಾಧೆ ಕಾಣಿಸಿಕೊಂಡರೂ ಸಹ ಈ ಬಾರಿ ಇಳುವರಿ ಉತ್ತಮವಾಗಿ ಬಂದಿದೆ. ಆದರೆ, ಇದೀಗ ಜಿಟಿ ಜಿಟಿ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆ ನಷ್ಟವಾಗುವ ಆತಂಕದಲ್ಲಿದ್ದಾರೆ ರೈತರು. ಈ ವಾತಾವರಣದ ನಡುವೆಯೇ ಕುಕನೂರು ತಾಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ತೊಂಡಿಹಾಳ, ಬಂಡಿಹಾಳ, ಯರೇಹಂಚಿನಾಳ ಸಿದ್ನೇಕೊಪ್ಪ ಸೇರಿ ಅನೇಕ ಗ್ರಾಮಗಳಲ್ಲಿ ಹೆಸರು ಕಾಳು ಕಟಾವು ಮುಂದುವರೆದಿದೆ. ಮಳೆಯಿಂದಾಗಿ ಬೆಳೆ ಹಾಳಾಗಬಾರದು ಎಂಬ ಉದ್ದೇಶದಿಂದ ಬಂದಷ್ಟು ಬರಲಿ ಎಂದುಕೊಂಡು ಕೃಷಿ ಕೂಲಿಕಾರರಿಗೆ ಅಧಿಕ ಹಣ ನೀಡಿ ಬೆಳೆ ಕಟಾವು ಮಾಡಲಾಗುತ್ತಿದೆ.
ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂಬ ಆತಂಕ ರೈತರದ್ದಾಗಿದೆ.