ಕುಷ್ಟಗಿ (ಕೊಪ್ಪಳ): ಕುಷ್ಟಗಿ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ರೋಗಿಗಳಿಗೆ ಆಕ್ಸಿಜನ್ ಹಾಗೂ ಚಿಕಿತ್ಸೆಯ ಕೊರತೆಯಾಗದಂತೆ ನಿಗಾವಹಿಸಲು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ. ಶರಣು ಮೂಲಿಮನಿ ಅವರಿಗೆ ನಿರ್ದೇಶನ ನೀಡಿದರು.
ಇಲ್ಲಿನ ಸರ್ಕ್ಯೂಟ್ ಹೌಸ್ನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿನ್ನೆ (ಸೋಮವಾರ) ಕೋವಿಡ್ ಸೋಂಕಿತರೊಬ್ಬರಿಗೆ ಕೊಪ್ಪಳದಲ್ಲಿ ಬೆಡ್ ಖಾಲಿ ಇಲ್ಲ ಎನ್ನುವ ಕಾರಣದಿಂದ ಪುನಃ ಅಲ್ಲಿಂದ ಆ್ಯಂಬುಲೆನ್ಸ್ನಲ್ಲಿ ಆಕ್ಸಿಜನ್ ವ್ಯವಸ್ಥೆಯಲ್ಲಿ ಕುಷ್ಟಗಿ ಕೋವಿಡ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿರುವುದನ್ನು ಸಭೆಯ ಗಮನಕ್ಕೆ ತಂದರು.
ತಹಶೀಲ್ದಾರ್ ಎಂ.ಸಿದ್ದೇಶ್ ಅವರು, ಕುಷ್ಟಗಿ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಸೌಮ್ಯ ಹಾಗೂ ಲಕ್ಷಣರಹಿತರಿಗೆ ಚಿಕಿತ್ಸೆ ನೀಡುತ್ತಿದೆ. ಉಸಿರಾಟದ ತೊಂದರೆ ಪ್ರಕರಣಗಳಿದ್ದರೆ ಕೊಪ್ಪಳಕ್ಕೆ ಕಳಿಸಲಾಗುತ್ತಿದೆ. ಆಕ್ಸಿಜನ್ ಕೊರತೆಯಾಗದಂತೆ ನಿಗಾವಹಿಸಿರುವುದಾಗಿ ತಿಳಿಸಿದರು.
ಕೋವಿಡ್ ಕೇರ್ ಸೆಂಟರ್ ಮೇಲುಸ್ತುವಾರಿ ವಹಿಸಿದ ವೈದ್ಯರು ಸರಿಯಾಗಿ ನೋಡಿಲ್ಲ. ಮ್ಯಾನೇಜ್ ಮಾಡದೇ ಇರುವುದು ಈ ತೊಂದರೆಗೆ ಕಾರಣವಾಗಿದೆ. ರೆಮಿಟೊಯಿಜರ್ಸ್ ಇಂಜಕ್ಷನ್ ಈ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರು ಆಯಷ್ ವೈದ್ಯರಾಗಿದ್ದು, ಚಿಕಿತ್ಸೆ ನೀಡಲು ಬರುವುದಿಲ್ಲ. ಎಂಬಿಬಿಎಸ್ ವೈದ್ಯರು ಮಾತ್ರ ಚಿಕಿತ್ಸೆ ನೀಡಬಹುದಾಗಿದೆ ಎಂದು ಪ್ರಭಾರಿ ವೈದ್ಯಾಧಿಕಾರಿ ಡಾ. ಶರಣು ಮೂಲಿಮನಿ ಹೇಳಿದರು.
ವಾರದಲ್ಲಿ ಶಾಲೆಗಳು ಆರಂಭವಾಗುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ಶಿಕ್ಷಕರ ಕೊರತೆಯಾಗದಂತೆ ಅತಿಥಿ ಶಿಕ್ಷಕರಿಂದ ಸರಿಪಡಿಸುವಂತೆ ಶಾಸಕ ಬಯ್ಯಾಪೂರ ಅವರು, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್ ಅವರಿಗೆ ಸೂಚಿಸಿದರು. ಪ್ರಾಥಮಿಕ ಶಾಲೆಗಳಿಗೆ 353 ಅತಿಥಿ ಶಿಕ್ಷಕರು, ಪ್ರೌಢಶಾಲೆಗಳಿಗೆ 54 ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಂಡಿರುವುದಾಗಿ ಬಿಇಒ ಚನ್ನಬಸಪ್ಪ ಮಗ್ಗದ್ ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ತಹಶೀಲ್ದಾರ್ ಎಂ.ಸಿದ್ದೇಶ್, ತಾಪಂ ಇಒಕೆ ತಿಮ್ಮಪ್ಪ, ಜಿಪಂ ಸದಸ್ಯರಾದ ನೇಮಣ್ಣ ಮೇಲಸಕ್ರಿ, ವಿಜಯ ನಾಯಕ್ ಮತ್ತಿತರರಿದ್ದರು.