ಕೊಪ್ಪಳ: ಕೌಟುಂಬಿಕ ಸಮಸ್ಯೆಯನ್ನು ಮಂತ್ರ, ತಂತ್ರ ಹಾಗೂ ಪೂಜೆಯ ಮೂಲಕ ಸರಿಪಡಿಸುವುದಾಗಿ ಹೇಳಿ ವ್ಯಕ್ತಿಯೋರ್ವ ಹಣ ಕಬಳಿಸಿರುವ ಆರೋಪ ಕೇಳಿಬಂದಿದೆ.
ಕೊಪ್ಪಳದಿಂದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಪಟ್ಟಣದ ಅಂಬಾ ಭವಾನಿ ದೇವಸ್ಥಾನದ ಬಳಿ ಇದೇ ವಿಚಾರವಾಗಿ ದಂಪತಿ ಹಾಗೂ ಓರ್ವ ವ್ಯಕ್ತಿಯ ನಡುವೆ ಬೀದಿ ರಂಪಾಟ ನಡೆದಿದೆ. ಭಾಗ್ಯನಗರ ಪಟ್ಟಣದ ನಿವಾಸಿ ಮಹಾದೇವಿ ಎಂಬುವವರಿಗೆ ಹಂದ್ರಾಳ ಗ್ರಾಮದ ಚಂದನಗೌಡ ಪಾಟೀಲ್ ಎಂಬ ವ್ಯಕ್ತಿ ಪೂಜೆ ಹಾಗೂ ಮಂತ್ರ ತಂತ್ರದ ಮೂಲಕ ಮನೆಯಲ್ಲಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಮನೆಯಲ್ಲಿ ನಿಂಬೆ ಹಣ್ಣುಗಳನ್ನಿಟ್ಟು ಪೂಜೆ ಮಾಡಿದ್ದನಂತೆ. ಈ ಪೂಜೆಗೆ 50 ಸಾವಿರ ರೂ. ತೆಗೆದುಕೊಂಡು ಮೋಸ ಮಾಡಿದ್ದಾನೆ ಎಂದು ಮಹಾದೇವಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ.
ಆದರೆ, ಪೂಜೆ ಮಾಡಿದ ಚಂದನಗೌಡ ಪಾಟೀಲ್ ನಾನು ಅವರಿಂದ ಹಣ ತೆಗೆದುಕೊಂಡಿಲ್ಲ. ಕೇವಲ 501 ರೂ. ದಕ್ಷಿಣೆ ನೀಡಿದ್ದಾರೆ. ದಂಪತಿ ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತಿದ್ದಾನೆ. ಇದೇ ವಿಚಾರವಾಗಿ ರಂಪಾಟ ನಡೆದು ದಂಪತಿ, ಚಂದನಗೌಡ ಪಾಟೀಲ್ಗೆ ಗೂಸಾ ನೀಡಿದ್ದಾರೆ. ಗಲಾಟೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೂವರನ್ನೂ ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಮೀನುಗಾರರ ಸಮಸ್ಯೆಗೆ ಧ್ವನಿಯಾಗುವೆ: ಕಡಲ ಮಕ್ಕಳಿಗೆ ಡಿಕೆಶಿ ಅಭಯ