ಕೊಪ್ಪಳ : ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಈಗ 32 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನೊಬ್ಬ ಮಹಿಳೆಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.
ಇದೇ ಮೇ 5ರಂದು ಬೆಂಗಳೂರಿನಿಂದ ಗಂಗಾವತಿಗೆ ಬಸ್ ಮೂಲಕ 30 ಜನ ಪ್ರಯಾಣಿಕರು ಬಂದಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ಗಂಗಾವತಿಯಿಂದ ಕಂಪ್ಲಿಗೆ ಹೋಗಿದ್ದಾನೆ. ಈಗ ಕಂಪ್ಲಿಯಲ್ಲಿ ಆ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ನಿನ್ನೆ ಸಂಜೆ 5.30ಕ್ಕೆ ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಅಂದು ಆ ಬಸ್ನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರು, ಚಾಲಕ, ಕಂಡಕ್ಟರ್, ಆಟೋ ಡ್ರೈವರ್ ಅವರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 33 ಜನ ಕೊಪ್ಪಳ ಜಿಲ್ಲೆಯವರು ಪ್ರೈಮರಿ ಕಾಂಟ್ಯಾಕ್ಟ್ ಆಗುತ್ತಾರೆ. ಇನ್ನುಳಿದಂತೆ 7 ಜನ ಹೊರ ಜಿಲ್ಲೆಯವರಿದ್ದಾರೆ.
ಪ್ರಯಾಣಿಕರ ಪೈಕಿ 5 ಜನ ಬೇರೆ ಜಿಲ್ಲೆಗೆ ಹೋಗಿದ್ದಾರೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಒಬ್ಬ ಮಹಿಳಾ ಪ್ರಯಾಣಿಕರು ಸಿಗುತ್ತಿಲ್ಲ. ಈ ಮಹಿಳೆಯನ್ನು ಪತ್ತೆ ಹಚ್ಚುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಮಹಿಳೆಯನ್ನು ಸಹ ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗುವುದು ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕ ಹೊಂದಿರುವವರ ಪೈಕಿ ಗಂಗಾವತಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ 23 ಜನ ಹಾಗೂ ಗಂಗಾವತಿಯ ಪಾರ್ಥ ಹೋಟೆಲ್ನಲ್ಲಿ 7 ಜನ ಆರೋಗ್ಯ ಸಿಬ್ಬಂದಿಯನ್ನಿರಿಸಲಾಗಿದೆ.
ಬಸ್ ಚಾಲಕನನ್ನು ಕುಷ್ಟಗಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕಂಟ್ರೋಲರ್ ಅವರನ್ನು ಗಂಗಾವತಿಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲದೆ ದ್ವಿತೀಯ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್ ಹೇಳಿದ್ದಾರೆ.