ಕುಷ್ಟಗಿ (ಕೊಪ್ಪಳ): ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ಜೇನರ್ ಅವರ ತವರು ಗ್ರಾಮದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಶುದ್ಧ ನೀರಿನ ಘಟಕ ನೀರಿನ ಅಭಾವದ ಹಿನ್ನೆಲೆಯಲ್ಲಿ ನಿರುಪಯುಕ್ತವಾಗಿದೆ.
ಟೆಂಗುಂಟಿ ಗ್ರಾಮದ ಹಳ್ಳದ ಸೇತುವೆ ಬಳಿ, 2014-15ರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃಧ್ಧಿ ಯೋಜನೆಯಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದ್ದು, ಇನ್ನೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಎಸ್ಸಿ ಕಾಲೋನಿಯಲ್ಲಿ ಘಟಕದ ಕಟ್ಟಡ ಮಾತ್ರವಿದೆ. ಇನ್ನು ಇಲ್ಲಿಯವರೆಗೂ ಕುಷ್ಟಗಿ ಪಟ್ಟಣದ ಹೊರವಲಯದ ಕೊಳವೆ ಬಾವಿಯ ಮೂಲಕ ಪೂರೈಸಿದ ನೀರನ್ನೇ ನೇರವಾಗಿ ಬಳಸುವಂತಾಗಿದೆ.
ಈ ಭಾಗದಲ್ಲಿ ಕೊಳವೆ ಬಾವಿಗಳ ನೀರು ಕ್ಷಾರಯುಕ್ತವಾಗಿದ್ದು, ಕುಡಿಯುವುದಕ್ಕೂ ಯೋಗ್ಯವಾಗಿಲ್ಲ. ಈ ನೀರನ್ನು ಶುದ್ಧ ಘಟಕಗಳ ಮೂಲಕ ಶುದ್ಧೀಕರಿಸಿದರೆ, ಶೇ.25ರಷ್ಟು ನೀರು ಮಾತ್ರ ಸಿಗುತ್ತಿದೆ. ಈ ಕಾರಣದಿಂದ ಶುದ್ಧ ನೀರಿನ ಘಟಕಗಳಿದ್ದರೂ, ಶುದ್ಧ ನೀರು ನಾಮಫಲಕಕ್ಕೆ ಸೀಮಿತವಾಗಿದೆ.
ಇನ್ನು ಗ್ರಾಮದ ವಕೀಲರಾದ ಪರಶುರಾಮ್ ಆಡಿನ್ ಪ್ರತಿಕ್ರಿಯಿಸಿ, ಟೆಂಗುಂಟಿ ಗ್ರಾಮಕ್ಕೆ ನೀರಿನ ತೊಂದರೆ ಆಗಾಗ್ಗೆ ಎದುರಿಸುವಂತಾಗಿದೆ. ಶಾಶ್ವತ ಪರಿಹಾರವಾಗಿ ಕುಷ್ಟಗಿ ಮೂಲಕ ಹಾದು ಹೋಗಿರುವ ಜಿಂದಾಲ್ ಬೃಹತ್ ಪೈಪಲೈನ್ನಿಂದ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿಕೊಟ್ಟರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.