ಕೊಪ್ಪಳ: ಪಿಎಸ್ಐ ನೇಮಕಾತಿ ಮಾಡಿಸಿಕೊಡುವುದಾಗಿ ಅಭ್ಯರ್ಥಿಯಿಂದ ಹಣ ಪಡೆಯಲಾಗಿದೆ. ಆದರೆ, ಮರಳಿ ನೀಡುವಲ್ಲಿ ವಿಳಂಬವಾಗಿರುವ ಕುರಿತು ಶಾಸಕರೊಬ್ಬರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದಕ್ಕೆ ಪ್ರತ್ರಿಕ್ರಿಯಿಸಿದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು, ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ.
ಆದರೆ, ಪ್ರಕರಣದ ಕುರಿತು ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತನಾಡಿದರು. ನಾನು ಈ ಕುರಿತು ಬಗೆಹರಿಸುತ್ತೇನೆ ಎಂದು ಅವರಿಬ್ಬರ ವ್ಯವಹಾರದ ಮಧ್ಯಸ್ಥಿಕೆ ವಹಿಸಿದ್ದೇ ಅಷ್ಟೇ. ನಾನು ಯಾವುದೇ ಹಣವನ್ನು ಪಡೆದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ನನ್ನ ರಾಜಕೀಯ ಜೀವನಕ್ಕೆ ಕಳಂಕ ತರಲು ನನಗಾಗದವರು ಯಾರೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.
ನಾನು ಸರ್ಕಾರಕ್ಕೆ ಏಕೆ ಆ ಹಣ ಕೊಡಬೇಕು? ನಾನು ಹಾಗೆ ಹೇಳಿಲ್ಲ. ಇದು ಇಂದು - ನಿನ್ನೆಯದಲ್ಲ. ವರ್ಷಗಳ ಹಿಂದಿನಿಂದಲೂ ಈ ಕುರಿತು ಇಬ್ಬರ ನಡುವೆ ಮನಸ್ಥಾಪವಿತ್ತು. ಸಮಸ್ಯೆ ಪರಿಹರಿಸುವಂತೆ ನನ್ನನ್ನು ಕೇಳಿದ್ದರು. ಅದನ್ನೇ ಮಾತನಾಡಿರುವೆ. ಚುನಾವಣಾ ವರ್ಷವಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಆಡಿಯೊ ಮತ್ತು ವಿಡಿಯೊ ವೈರಲ್ ಮಾಡುತ್ತಿದ್ದಾರೆ ಎಂದರು.
ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಯಾವುದೇ ತಪ್ಪು ಮಾಡಿಲ್ಲ. ಆ ಆಡಿಯೋ ಏನೆಂದು ನಾನು ಕೇಳಿಲ್ಲ ಎಂದು ಸಚಿವ ಆನಂದ ಸಿಂಗ್ ಕೊಪ್ಪಳದಲ್ಲಿಂದು ಹೇಳಿಕೆ ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಕುರಿತು ಪಡೆದ ಹಣ ಹಿಂದಿರುಗಿಸಿಲ್ಲ ಎಂಬ ಕುರಿತು ವೈರಲ್ ಆದ ಆಡಿಯೋ ಕುರಿತು ಪ್ರತ್ರಿಕ್ರಿಯಿಸಿ ಮಾತನಾಡಿದ ಅವರು, ಇದು ವಿರೋಧ ಪಕ್ಷದವರ ಕೈವಾಡ. ನಮ್ಮ ಪಕ್ಷದ ಶಾಸಕರ ಮೇಲೆ ಅಪಪ್ರಚಾರ ಮಾಡಲು ಇಂತಹವುಗಳನ್ನೆಲ್ಲ ಮಾಡಿದ್ದಾರೆ. ಈ ಆಡಿಯೋ ನಾನು ಕೇಳಿಲ್ಲ. ಹಾಗೊಂದು ವೇಳೆ ಅವರು ತಪ್ಪು ಮಾಡಿದ್ದರೆ ಇಂದು ಮಾಧ್ಯಮದ ಮುಂದೆ ಬರುತ್ತಿರಲಿಲ್ಲ. ಈ ಕುರಿತು ಮಾತನಾಡುತ್ತಿರಲಿಲ್ಲ. ಈ ಕುರಿತು ತನಿಖೆಯಾಗಲಿ, ಹಾಗೊಂದು ವೇಳೆ ತಪ್ಪು ನಡೆದಿದ್ದರೆ ಕ್ರಮ ವಹಿಸಲಿ ಎಂದು ಸಚಿವ ಆನಂದ ಸಿಂಗ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಹಗರಣ ನಡೆದಿಲ್ಲ: ಸಚಿವ ಮಾಧುಸ್ವಾಮಿ ಸ್ಪಷ್ಟನೆ