ಕುಷ್ಟಗಿ (ಕೊಪ್ಪಳ) : ಕೊರೊನಾ ಸಂದರ್ಭದಲ್ಲಿ ಮುಂಚೂಣಿಯಾಗಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತರಿಗೆ, ಸೇವಾ ಹಾಗೂ ಜೀವನ ಭದ್ರತೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್ ಶಿವರಾಮೇಗೌಡ ಬಣ) ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರು 12 ಸಾವಿರ ರೂ. ಗೌರವಧನ ನಿಗದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಜುಲೈ 10ರಿಂದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹೋರಾಟಕ್ಕೆ ಕರವೇ ಸಂಘಟನೆ ಬೆಂಬಲಿಸಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರನ್ನು ಕೊರೊನಾ ಸಂದರ್ಭದಲ್ಲಿ ಸೇವೆಗೆ ಬಳಸಿಕೊಂಡು, ಅವರಿಗೆ ಕೊರೊನಾ ವಾರಿಯರ್ಸ್ ಎಂದು ಹೂಮಳೆ ಗೈದರೇ ಅವರ ಹೊಟ್ಟೆ ತುಂಬುವುದಿಲ್ಲ. ಕೂಡಲೇ ಅವರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಧ್ಯಕ್ಷ ಅಜ್ಜಪ್ಪ ಕರಡಕಲ್, ಮಲ್ಲಿಕಾರ್ಜುನ ಗುಗ್ರಿ, ಮಾರುತಿ ಹಲಗಿ, ಯಮನೂರ ಭೋವಿ, ಹೊನ್ನಪ್ಪ ಭೋವಿ ಮತ್ತಿತರರಿದ್ದರು.