ಕೊಪ್ಪಳ: ಪತ್ರಿಕಾ ಛಾಯಾಗ್ರಾಹಕನ ಕ್ಯಾಮರಾ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರ್ಟಿಓ ಇನ್ಸ್ಪೆಕ್ಟರ್ ವಿರುದ್ಧ ಮಾಧ್ಯಮ ಪ್ರತಿನಿಧಿಗಳು ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಓ) ಮುಂದೆ ಪ್ರತಿಭಟನೆ ನಡೆಸಿದರು.
ದಿನಪತ್ರಿಕೆ ಛಾಯಾಗ್ರಾಹಕ ನಾಗರಾಜ ಹಡಗಲಿ ಸುದ್ದಿಯೊಂದಕ್ಕೆ ಸಂಬಂಧಿಸಿದಂತೆ ಫೋಟೋ ತೆಗೆಯಲು ನಗರ ದ ಹೊರವಲಯದಲ್ಲಿರುವ ಆರ್ಟಿಓಗೆ ಹೋಗಿದ್ದರು. ಈ ವೇಳೆ ಆರ್ಟಿಓ ಇನ್ಸ್ಪೆಕ್ಟರ್ ಮಂಜುನಾಥ್ ಎಂಬುವವರು ನಾಗರಾಜ ಹಡಗಲಿಯವರ ಕ್ಯಾಮರಾ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಛಾಯಾಗ್ರಾಹಕನ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಆರ್ಟಿಓ ಕಚೇರಿ ಮುಂದೆ ಧರಣಿ ನಡೆಸಿದರು. ಇನ್ಸ್ಪೆಕ್ಟರ್ ಮಂಜುನಾಥ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಧರಣಿ ನಿರತರನ್ನು ಸಮಾಧಾನಪಡಿಸಿದರು. ಇನ್ಸ್ಪೆಕ್ಟರ್ ಮಂಜುನಾಥ್ ಕ್ಷಮೆ ಕೇಳಿದ ಬಳಿಕ ಪ್ರತಿಭಟನೆ ವಾಪಾಸ್ ಪಡೆಯಲಾಯಿತು.