ಗಂಗಾವತಿ: ಎಸ್ಟಿ ವರ್ಗಕ್ಕೆ ನೀಡಲಾಗುತ್ತಿರುವ ಮೀಸಲಾತಿಯ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಾಲ್ಮಿಕಿ ನಾಯಕ ಸಮುದಾಯದ ಮುಖಂಡರು ನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆನೆಗೊಂದಿ ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ ನಾಯಕ ಸಮುದಾಯದ ಮುಖಂಡರು, ತಹಶೀಲ್ದಾರ್ ರೇಣುಕಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ಮೀಸಲಾತಿ ಹೆಚ್ಚಳಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯ ಸಮ್ಮತ, ಸಂವಿಧಾನ ಬದ್ಧ ಹಕ್ಕಿಗಾಗಿ ಸಮುದಾಯ ಕಳೆದ ಒಂದು ದಶಕದಿಂದ ಹೋರಾಟ ಮಾಡುತ್ತಲೆ ಬಂದಿದೆ. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಾಂಕೇತಿಕವಾಗಿ ಹತ್ತು ದಿನಗಳ ಕಾಲದ ಹೋರಾಟ ಮಾಡುತ್ತೇವೆ. ಬಳಿಕ ಉಗ್ರ ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದು ಧರಣಿ ನಿರತರು ಎಚ್ಚರಕೆ ನೀಡಿದರು.