ಕೊಪ್ಪಳ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರ ವಿರುದ್ಧ ಅವಹೇಳನವಾಗಿ ಮಾತನಾಡಿರುವ ಅರ್ಚಕ ವಿದ್ಯಾದಾಸ ಬಾಬಾನನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ವಿದ್ಯಾದಾಸ ಬಾಬಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕನಾಗಿದ್ದ ವಿದ್ಯಾದಾಸ ಬಾಬಾ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪದಗಳಿಂದ ನಿಂದಿಸಿದ್ದಾನೆಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಈ ಹಿಂದೆ ದೇವಸ್ಥಾನ ಸರ್ಕಾರದ ಸುಪರ್ದಿಯಲ್ಲಿ ಇರದ ಸಂದರ್ಭದಲ್ಲಿ ವಿದ್ಯಾದಾಸ ಬಾಬಾ ದೇವಸ್ಥಾನದ ಆದಾಯವನ್ನು ತಾನೇ ಬಳಸಿಕೊಂಡಿದ್ದಾನೆ. ಅಲ್ಲಿ ಕೋಮು ಗಲಬೆ ಸೃಷ್ಟಿಸುವ ಹಾಗೂ ಗಲಾಟೆಗೆ ಕಾರಣವಾಗುವ ಸನ್ನಿವೇಶ ಸೃಷ್ಟಿಯಾದಾಗ ಅಂಜನಾದ್ರಿ ಪರ್ವತ ದೇವಸ್ಥಾನವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. ಪರಿಣಾಮ ಅರ್ಚಕ ವಿದ್ಯಾದಾಸ ಬಾಬಾ ಜಿಲ್ಲಾಧಿಕಾರಿ ಬಗ್ಗೆ ಅವಹೇಳನ ಪದಗಳಿಂದ ನಿಂದಿಸಿದ್ದಾನೆ, ಕೂಡಲೇ ಬಾಬಾನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ, ಖಜಾಂಚಿ ಸುಶೀಲೇಂದ್ರರಾವ್ ದೇಶಪಾಂಡೆ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಮಹ್ಮದ್ ಆಸೀಫ್ ಬಹದ್ದೂರ ಬಂಡಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.