ಗಂಗಾವತಿ: ಲಾಕ್ಡೌನ್ ಸಂದರ್ಭದಿಂದ ಇಲ್ಲಿವರೆಗೂ ಚೇತರಿಕೆ ಕಾಣದ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಖಾಸಗಿ ಶಾಲೆಗಳ ಶಿಕ್ಷಕ ಹಾಗೂ ಸಿಬ್ಬಂದಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಶಿಕ್ಷಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ನೇತೃತ್ವದಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೋವಿಡ್ ಹಿನ್ನೆಲೆ ನಾನಾ ವಲಯಕ್ಕೆ ವಿಶೇಷ ಆದ್ಯತೆ ನೀಡಿ ಪರಿಹಾರ ಘೋಷಣೆ ಮಾಡಲಾಗಿದೆ. ಹೀಗಾಗಿ ತಮಗೂ ನೀಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಕಳೆದ ಆರೇಳು ತಿಂಗಳಿಂದ ವೇತನ ನೀಡಲಾಗುತ್ತಿಲ್ಲ. ಪರಿಣಾಮ ಬಹಳಷ್ಟು ಜನ ಶಿಕ್ಷಕ ವೃತ್ತಿ ಬಿಟ್ಟು, ದನ-ಕುರಿ ಕಾಯಲು ಮತ್ತು ತರಕಾರಿ ಮಾರಾಟ ಮಾಡುವ, ಆಟೋ ಓಡಿಸುವಂತ ನೂರಾರು ವೃತ್ತಿಗಳಿಗೆ ತೆರಳಿದ್ದಾರೆ.
ಸಾಕಷ್ಟು ಜನ ಶಿಕ್ಷಕರು ವಿದ್ಯಾವಂತರಾಗಿಯೂ ಉದ್ಯೋಗದಿಂದ ವಂಚಿತವಾದ ಹಿನ್ನೆಲೆ ಜೀವನದಲ್ಲಿನ ಭರವಸೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಕೂಡಲೇ ಸರ್ಕಾರ ಖಾಸಗಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.