ಕೊಪ್ಪಳ: ಜಿಲ್ಲೆಯಲ್ಲಿ ತೋಳ ಹಾಗೂ ಕರಡಿ ಸಂರಕ್ಷಿತ ಪ್ರದೇಶಕ್ಕಾಗಿ ಸರ್ಕಾರಕ್ಕೆ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆ ಈಗಾಗಲೇ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚೆಯಾಗಿದೆ.
ಜಿಲ್ಲೆಯ ಕನಕಗಿರಿ ತಾಲೂಕಿನ ಬಂಕಾಪುರ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ತೋಳಗಳಿವೆ. ತೋಳಗಳ ಸಂರಕ್ಷಣೆಯ ದೃಷ್ಠಿಯಿಂದ, ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದಲೂ ಬಂಕಾಪುರ ಭಾಗದಲ್ಲಿ ತೋಳ ಸಂರಕ್ಷಿತ ಪ್ರದೇಶ ಮಾಡುವುದು ಸೂಕ್ತವಾಗಿದೆ. ಬಂಕಾಪುರ ಭಾಗದ ಸುಮಾರು 332 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ತೋಳ ಸಂರಕ್ಷಿತ ಪ್ರದೇಶ ಸ್ಥಾಪಿಸಲು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಅಲ್ಲದೆ ಜಿಲ್ಲೆಯ ಹಿರೇಸೂಳಿಕೇರಿ ಭಾಗದಲ್ಲಿಯೂ ಅಧಿಕ ಪ್ರಮಾಣದಲ್ಲಿ ಕರಡಿಗಳಿದ್ದು, ಈ ಭಾಗದ ಸುಮಾರು 1,022 ಹೆಕ್ಟೇರ್ ಪ್ರದೇಶದಲ್ಲಿ ಕರಡಿ ಸಂರಕ್ಷಿತ ಪ್ರದೇಶ ಸ್ಥಾಪನೆಗೆ ಅರಣ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೊಪ್ಪಳದ ಡಿಸಿಎಫ್ ಹರ್ಷಭಾನು ಜಿ.ಪಿ. ತಿಳಿಸಿದ್ದಾರೆ.