ಕುಷ್ಟಗಿ : ಸಾಲ ಮಾಡಿ ಕಷ್ಟ ಪಟ್ಟು ಈರುಳ್ಳಿ ಬೆಳೆದ ರೈತರು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಸಂಷಕ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನ ಲಿಂಗದಹಳ್ಳಿ ಗ್ರಾಮದ ರೈತರಾದ ಪರಶುರಾಮ ಗೌಡ ಮತ್ತು ಶ್ಯಾಮಿದ್ ಸಾಬ ಜೊತೆಯಾಗಿ 3 ಎಕರೆ ಜಮೀನನಲ್ಲಿ ಈರುಳ್ಳಿ ಬೆಳೆದಿದ್ದಾರೆ. ಇದಕ್ಕಾಗಿ ಇವರು 2 ಲಕ್ಷ ರೂ. ಖರ್ಚು ಮಾಡಿದ್ದು, 1 ಲಕ್ಷ ರೂ. ಸಾಲ ಮಾಡಿದ್ದಾರೆ. ರೈತರ ನಿರೀಕ್ಷೆಯಂತೆ ಬೆಳೆಯೇನೋ ಚೆನ್ನಾಗಿ ಬಂದಿದೆ. ಆದರೆ, ಲಾಕ್ ಡೌನ್ನಿಂದಾಗಿ ಹೆಚ್ಚಿನ ಕಡೆ ಮಾರುಕಟ್ಟೆಗಳು ಬಂದ್ ಆಗಿವೆ. ಕೆಲವೊಂದು ಕಡೆ ಮಾರುಕಟ್ಟೆಗಳು ತೆರೆದಿದ್ದರೂ, ಒಂದು ಕ್ವಿಂಟಾಲ್ ಈರುಳ್ಳಿಯನ್ನು ಕೇವಲ 150 ರಿಂದ 200 ರೂ.ಗೆ ಕೇಳುತ್ತಿದ್ದಾರಂತೆ. ಹೀಗಾಗಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಈರುಳ್ಳಿಗೆ ಸೂಕ್ತ ಬೆಲೆ ಸಿಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಬೆಲೆ ಹೆಚ್ಚಾದಾಗ ಈರುಳ್ಳಿ ಮಾರಾಟ ಮಾಡೋಣ ಅಂದ್ರೆ ಅದೂ ಆಗುತ್ತಿಲ್ಲ. ಈರುಳ್ಳಿ ಶೇಖರಿಸಿಟ್ಟರೆ ಕೊಳೆತು ಹೋಗುತ್ತದೆ. ಬಿಸಿಲಿಗೆ ಒಣಗಲು ಹಾಕಿದರೆ ತೂಕ ಕಡಿಮೆಯಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇತ್ತೀಚೆಗೆ ಈರುಳ್ಳಿ ಬೆಳೆದ ರೈತ ಮಹಿಳೆಯು ವಿಡಿಯೋ ಮೂಲಕ ಕಷ್ಟ ತೊಡಿಕೊಂಡಾಗ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಅದೇ, ರೀತಿ ನಮ್ಮ ಕಷ್ಟಕ್ಕೂ ಸಿಎಂ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.