ಗಂಗಾವತಿ: ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಟ್ರಾವೆಲ್ಸ್ ಏಜೆನ್ಸಿಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿಗೆ ನಿಂತಿರುವ ಆರೋಪ ಕೇಳಿ ಬಂದಿದೆ.
ಅದರಲ್ಲು ದೂರದ ಊರಿನ ಪ್ರಯಾಣಿಕರನ್ನು ಖಾಸಗಿ ಏಜೆನ್ಸಿಗಳು ಲೂಟಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಗಂಗಾವತಿ ನಗರದಿಂದ ಹತ್ತಿಪ್ಪತ್ತು ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲು ಸಾರಿಗೆ ಇಲಾಖೆಯ ದರಕ್ಕಿಂತ ಹೆಚ್ಚಿಗೆ ಅಂದರೆ ಐದರಿಂದ ಹತ್ತು ರೂಪಾಯಿ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ.
ಐದು ಹತ್ತು ರೂಪಾಯಿ ಪ್ರಯಾಣಿಕರ ಜೇಬಿಗೆ ಅಷ್ಟೊಂದು ದೊಡ್ಡ ಭಾರವಲ್ಲ. ಆದರೆ ಗಂಗಾವತಿಯಿಂದ ಬೆಂಗಳೂರು, ಮಂಗಳೂರು, ಮೈಸೂರು ಮೊದಲಾದ ಭಾಗಕ್ಕೆ ಹೋಗುತ್ತಿರುವ ಪ್ರಯಾಣಿಕರಿಂದ ಖಾಸಗಿ ಟ್ರಾವೆಲ್ಸ್ ಏಜನ್ಸಿಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಎನ್ನಲಾಗುತ್ತಿದೆ.
ಸಾಮಾನ್ಯ ದಿನಗಳಲ್ಲಿ ಗಂಗಾವತಿಯಿಂದ ಬೆಂಗಳೂರಿಗೆ ತೆರಳುವ ಸ್ಲೀಪರ್ ಕೋಚ್ ವಾಹನದಲ್ಲಿ ಸಿಂಗಲ್ ಸೀಟಿಗೆ 610, ಡಬಲ್ನಲ್ಲಿ ಒಂದು ಸೀಟಿಗೆ 560 ಬೆಲೆ ಇದೆ.
ಆದರೆ ಮುಷ್ಕರದ ಹಿನ್ನೆಲೆ ಖಾಸಗಿ ಏಜನ್ಸಿಗಳು ಇದರ ಬೆಲೆಯನ್ನು ಸಿಂಗಲ್ಗೆ 950, ಡಬಲ್ನಲ್ಲಿ ಒಂದು ಸೀಟಿಗೆ 910 ರೂಪಾಯಿ ವಸೂಲಿ ಮಾಡಿವೆ ಎನ್ನಲಾಗಿದೆ.
ಪ್ರತಿ ವಾರದ ಕೊನೆಯಲ್ಲೂ ವೀಕೆಂಡ್ ನೆಪದಲ್ಲಿ ಖಾಸಗಿ ಏಜನ್ಸಿಗಳು 50ರಿಂದ 100 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತವೆ. ಹಬ್ಬ ಹರಿದಿನಗಳ ಬಿಡುವಲ್ಲಿ ಇದರ ಪ್ರಮಾಣ 200ರಿಂದ 300 ರೂಪಾಯಿಗೆ ಹೆಚ್ಚಾಗುತ್ತದೆ. ಇದೀಗ ಸಾರಿಗೆ ನೌಕರರ ಮುಷ್ಕರದ ಲಾಭ ಪಡೆದುಕೊಂಡ ಖಾಸಗಿ ಟ್ರಾವೆಲ್ಸ್ ಏಜೆನ್ಸಿಗಳು ಪ್ರಯಾಣಿಕರುನ್ನು ಲೂಟಿ ಮಾಡುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬೆಂಗಳೂರಿನಿಂದ ಬರಲು ಬಸ್ ಇಲ್ಲದ್ದರ ಪರಿಣಾಮ ಖಾಸಗಿ ವಾಹನಕ್ಕೆ ತಲಾ 2200 ಹಣ ನೀಡಿ ನನ್ನ ಪತ್ನಿ ಹಾಗೂ ಅಳಿಯನ್ನನ್ನು ಗಂಗಾವತಿಗೆ ಕರೆಯಿಸಿಕೊಂಡಿದ್ದಾಗಿ ಪತ್ರಕರ್ತ ವೃಷಭೇಂದ್ರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.