ಕುಷ್ಟಗಿ (ಕೊಪ್ಪಳ): ಜೂನ್ 25 ರಿಂದ 10ನೇ ತರಗತಿ ಪರೀಕ್ಷೆ ಆರಂಭವಾಗುತ್ತಿದೆ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ, ಸೀಟ್ ಸಂಖ್ಯೆ ಬಗ್ಗೆ ಮೂರು ದಿನದ ಮುಂಚೆಯೇ ಮಾಹಿತಿ ನೀಡಲು ವ್ಯವಸ್ಥೆ ಮಾಡಿರುವುದಾಗಿ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನ್ ಅತುಲ್ ತಿಳಿಸಿದರು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಮೊಬೈಲ್ ಸಂವಹನ ನಡೆಸಿದ ಅವರು, ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಹಾಜರಾಗುವ ಸಂದರ್ಭದಲ್ಲಿ ಗೊಂದಲಕ್ಕೀಡಾಗದಂತೆ ಮೊಬೈಲ್, ವಾಟ್ಸ್ಆ್ಯಪ್ಗೆ ಪರೀಕ್ಷಾ ಕೊಠಡಿ ಮತ್ತು ಕೊಠಡಿಯೊಳಗಿನ ಸೀಟ್ ಸಂಖ್ಯೆ ಚಿತ್ರ ಸಹಿತ ಕಳಿಸಲಾಗುವುದು. ಇದರ ಜೊತೆಗೆ ಸಹಾಯವಾಣಿ ಆರಂಭಿಸಲಾಗಿದ್ದು, 9481140038, 6362495554, 7019173350 ಸಂಖ್ಯೆಗೆ ಸಂಪರ್ಕಿಸಿ ವಿದ್ಯಾರ್ಥಿಗಳು ಮಾಹಿತಿ ಪಡೆಯಬಹುದು ಎಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು, 789 ಸಾಮಾನ್ಯ ಬಸ್, 1070 ಖಾಸಗಿ ವಾಹನ, 872 ವಿದ್ಯಾರ್ಥಿಗಳ ಪಾಲಕರ ಸ್ವಂತ ವಾಹನ, 622 ಕಾಲ್ನಡಿಗೆ, 296 ಸೈಕಲ್ ಹಾಗೂ 484 ವಸತಿ ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಲಿದ್ದಾರೆ.
ಪರೀಕ್ಷಾ ಕೊಠಡಿ ಬಳಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿವರಿಸಿದರು.