ಗಂಗಾವತಿ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಚಿಕಿತ್ಸೆಗಾಗಿ ಅದೂ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗೆ ಮುಗಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಈಗಾಗಲೇ ಗುಣಮಟ್ಟದ ಚಿಕಿತ್ಸೆ, ಅತ್ಯುತ್ತಮ ಸೇವೆಯಿಂದಾಗಿ ನಗರದ ಉಪ ವಿಭಾಗ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲಿ ಹೆಸರು ಮಾಡಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಸದಾ ಜನರಿಂದ ತುಂಬಿರುತ್ತದೆ. ಅಲ್ಲದೇ ಪ್ರತಿ ತಿಂಗಳ 9ರಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃತ್ವ ಸುರಕ್ಷಾ ಯೋಜನೆಯಲ್ಲಿ ಚಿಕಿತ್ಸೆ ಪಡೆಯಲು ಗರ್ಭಿಣಿಯರು ಮುಗಿಬೀಳುತ್ತಿದ್ದಾರೆ.
ನಗರದಲ್ಲಿ ಸಾಕಷ್ಟು ಹೆಸರು ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವುದರಿಂದ ಸಹಜವಾಗಿ ಗುಣಮಟ್ಟದ ಚಿಕಿತ್ಸೆ, ಸಲಹೆ ಸಿಕ್ಕಬಹುದು ಎಂಬ ಕಾರಣಕ್ಕೆ ಹೆಚ್ಚಿನ ಗರ್ಭಿಣಿಯರು ಆಗಮಿಸಿದ್ದರು.