ಗಂಗಾವತಿ: ಹಿಂದುತ್ವಕ್ಕಾಗಿ ದುಡಿದವರು, ಪ್ರಾಣ ಒತ್ತೆಯಿಟ್ಟವರು ಬಿಜೆಪಿಗೆ ಬೇಕಿಲ್ಲ. ಅವರಿಗೇನಿದ್ದರೂ ರೌಡಿಗಳು ಸಾಕು ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಹನುಮ ವ್ರತದ ಹಿನ್ನೆಲೆ ಅಂಜನಾದ್ರಿಗೆ ಲಕ್ಷಾಂತರ ಭಕ್ತರು ಮಾಲಾ ವಿರಮಣ ಹಮ್ಮಿಕೊಂಡ ಕಾರಣ ಅಂಜನಾದ್ರಿಗೆ ಭೇಟಿ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೌಡಿಗಳ ಸೇರ್ಪಡೆ ವಿಚಾರ ಬಿಜೆಪಿ ಪಕ್ಷಕ್ಕೆ ಶೋಭೆ ತರುವುದಿಲ್ಲ. ಹಣವಿದ್ದವರನ್ನು, ರೌಡಿಗಳನ್ನು, ಗೂಂಡಾಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುತಿದ್ದಾರೆ. ತ್ಯಾಗ, ಬಲಿದಾನ ಮಾಡಿ ಶ್ರಮ ವಹಿಸಿ ದುಡಿದ ಹಿಂದೂ ಕಾರ್ಯಕರ್ತರು ಅವರಿಗೆ ಕಾಣುತ್ತಿಲ್ಲ ಎಂದರು.
ನಮ್ಮ ಶ್ರೀರಾಮಸೇನೆಯ ಸಿದ್ಧಲಿಂಗ ಶ್ರೀ ಹಾಗೂ ನಾನು ರಾಜಕೀಯ ಪ್ರವೇಶ ನಿರ್ಧಾರ ಮಾಡಿದ್ರೆ ನಿಮಗೆ ಕಾಣುವುದಿಲ್ಲ. ಬದಲಾಗಿ ರೌಡಿಗಳು ಗೂಂಡಾಗಳು ಕಾಣುತ್ತಾರೆ. ಇಡೀ ಸಮಾಜದ ಸ್ವಾಸ್ಥ್ಯವನ್ನು, ನೈತಿಕತೆಯನ್ನು ಕೆಡಿಸುತ್ತಿರೋದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಗುಟುರು ಹಾಕಿದರು.
ಇದನ್ನೂ ಓದಿ: ಹಿಂದುಗಳ ರಕ್ಷಣೆಗೆ 25 ಪ್ರಖರ ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್
ಹಿಂದೂ ಸಂಘಟನೆಗಳ ಒಕ್ಕೂಟದಿಂದ 25 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಸುತ್ತೇವೆ. ಇದರಲ್ಲಿ ಐದು ಜನ ಸ್ವಾಮೀಜಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಅಂಜನಾದ್ರಿ ಆವರಣದ 500 ಮೀಟರ್ ಅಂತರದಲ್ಲಿ ಅನ್ಯ ಧರ್ಮಿಯರ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಟ್ಟರೆ ನಮ್ಮ ಹನುಮ ಭಕ್ತರು ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.