ಕುಷ್ಟಗಿ: ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಖಾತ್ರಿ ಕಾನೂನು ಜಾರಿ ಸೇರಿದಂತೆ ಹಲವು ತಿದ್ದುಪಡಿ ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ತಾಲೂಕು ಸಮಿತಿ ನೇತೃತ್ವದಲ್ಲಿ ಪಿಕೇಟಿಂಗ್ ಚಳುವಳಿ ಹಿನ್ನೆಲೆ ಅಂಚೆ ಕಚೇರಿ ಮುತ್ತಿಗೆಗೆ ಯತ್ನಿಸಿದ ಸಂದರ್ಭದಲ್ಲಿ 80ಕ್ಕೂ ಅಧಿಕ ಜನರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಇಲ್ಲಿನ ಎಪಿಎಂಸಿಯಿಂದ ಆರಂಭಿಸಿದ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಅಂಚೆ ಕಚೇರಿ ಸಮಿಪಿಸುತ್ತಿದ್ದಂತೆ ಪ್ರತಿಭಟನಾಕಾರರು ಅಂಚೆ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಮೊದಲೇ ಹಾಜರಿದ್ದ ಪೊಲೀಸರು ಯಾರನ್ನೂ ಒಳಗೆ ಬಿಡದೆ ಪ್ರವೇಶ ದ್ವಾರದಲ್ಲಿ ತಡೆದಾಗ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಅಂಚೆ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಆರ್.ಕೆ.ದೇಸಾಯಿ, ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ, ಸಂಗನಗೌಡ ಪಾಟೀಲ ಸೇರಿದಂತೆ ಪ್ರತಿಭಟನಾನಿರತರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಂತರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಿಡುಗಡೆಗೊಳಿಸಿದರು.