ಗಂಗಾವತಿ: ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಓಡಾಡುವ ಜನರನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನಗರ ಪೊಲೀಸರು ತಲಾ 200 ರೂಪಾಯಿ ದಂಡ ವಿಧಿಸುವ ಕಾರ್ಯಕ್ಕೆ ಮುಂದಾದರು.
ನಗರಠಾಣೆಯ ಪಿಎಸ್ಐ ವೆಂಕಟಸ್ವಾಮಿ, ಪಿಎಸ್ಐ ಶಹನಾಜ್ ಬೇಗಂ ನೇತೃತ್ವದಲ್ಲಿ, ನಗರಠಾಣೆ ಮತ್ತು ಸಂಚಾರಿಠಾಣೆಯ ಪೊಲೀಸರು ಮಾಸ್ಕ್ ಇಲ್ಲದವರನ್ನು ಪತ್ತೆ ಹಚ್ಚಿ ಹಿಡಿದು ತಂದು ದಂಡ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಇದರಲ್ಲಿ ಪಾದಾಚಾರಿ ಮಹಿಳೆಯರಿಗೂ ದಂಡ ಹಾಕಿದ್ದು ವಿಶೇಷವಾಗಿತ್ತು.
ಕೇವಲ ಎರಡು ಗಂಟೆಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಜನರಿಗೆ ಪೊಲೀಸರು ದಂಡ ಹಾಕಿ ಕೇವಲ ಮಾಸ್ಕ್ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿದಂತೆ ಕಂಡು ಬಂತು. ಈ ನಡುವೆ ವಾಹನದ ಡಿಎಲ್, ಆರ್.ಸಿ ಮೊದಲಾದ ಯಾವುದರ ಬಗ್ಗೆಯೂ ಗಮನ ಹರಿಸಲಿಲ್ಲ.