ಕೊಪ್ಪಳ: ಕೊರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ಜೋರಾಗಿದ್ದು ಜನರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದಾರೆ. ಮಾಸ್ಕ್ ಹಾಕದೆ ಓಡಾಡುತ್ತಿರೋರಿಗೆ ಪೊಲೀಸರು ದಂಡ ಜಡಿಯುತ್ತಿದ್ದಾರೆ.
ನಗರದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವ ಸವಾರರಿಗೆ ನೂರು ರೂಪಾಯಿ ದಂಡ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಪ್ರತಿ ದಿನ 100 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಆದರೂ ಸಹ ಜನರು ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಕಂಡುಬರುತ್ತಿದ್ದು, ನಗರದಲ್ಲಿ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.
ಕುಷ್ಟಗಿಯಲ್ಲಿ ಕೋವಿಡ್ ಹರಡದಂತೆ ನಿಯಂತ್ರಿಸಲು ಇಲ್ಲಿನ ಪೋಲೀಸರು ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾತನಾಡಿ, ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಕೋವಿಡ್ ಭಯ ಇಲ್ಲ. ಸಾವು, ನೋವುಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ. ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವುದು, ಹೊರಗೆ ಸಂಚಾರದ ವೇಳೆ ಮಾಸ್ಕ್ ಧರಿಸುವುದು ಮರೆಯಬಾರದು ಎಂದರು.
ಇಂದಿನಿಂದ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಸೂಲಿ ಆರಂಭಿಸಲಾಗಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಪಿಎಸ್ಐ ತಿಮ್ಮಣ್ಣ ನಾಯಕ ಹಾಜರಿದ್ದರು.