ಗಂಗಾವತಿ : ರೈತರ ಮತ್ತು ಕನ್ನಡದ ಹೆಸರು ಹೇಳಿಕೊಂಡು ಇಂದು ರಾಜ್ಯದಲ್ಲಿ ನೂರಾರು ದಂಧೆಕೋರ ಸಂಘಟನೆಗಳು ಹುಟ್ಟಿಕೊಂಡಿವೆ. ಇವುಗಳಿಗೆ ಸ್ವತಃ ಪೊಲೀಸರೇ ಬೆಂಗಾವಲಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಹಸಿರು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಇಂದು ಸಂಘಟನೆಗಳನ್ನು ಕಟ್ಟಿಕೊಂಡು ದಂಧೆ ಮಾಡುವುದು, ಸ್ವಾರ್ಥಕ್ಕಾಗಿ ಮತ್ತೊಬ್ಬರಿಗೆ ವಂಚನೆ ಮಾಡುವುದು, ಬೆದರಿಸುವುದು ಇವುಗಳು ರೈತ ಸಂಘದ ಉದ್ದೇಶಗಳಲ್ಲ. ರೈತರ ಮತ್ತು ಕನ್ನಡಪರ ಸಂಘಟನೆಗಳ ಹೆಸರಲ್ಲಿ ಇವೆಲ್ಲವನ್ನೂ ಕೆಲ ಸಂಘಟನೆಗಳು ಮಾಡುತ್ತಿವೆ. ಇದು ಹಣ ಮಾಡುವ ಇರುವ ಕೆಟ್ಟ ಕೆಲಸ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ರೈತ ಚಳವಳಿ ಪ್ರಾರಂಭವಾಗಿ 42 ವರ್ಷ ಸಂದಿವೆ. ಇದು ಸೈದ್ಧಾಂತಿಕ ವಿಚಾರದಲ್ಲಿ ಸ್ಥಾಪಿತವಾಗಿರುವುದು. ಇದು ನಡೆದು ಬಂದ ಹಾದಿ ಬಹಳ ಕಠಿಣವಾಗಿದೆ. ಈಗಲೂ ಇದರ ಉದ್ದೇಶಕ್ಕೆ ಅನುಗುಣವಾಗಿಯೇ ಹೋರಾಟ ರೂಪಿಸಲಾಗುತ್ತಿದೆ. ಆದರೆ, ಇಂದು ತಮ್ಮ ಸ್ವಾರ್ಥಕ್ಕಾಗಿ ಕೇವಲ ಹಸಿರು ವಸ್ತ್ರವನ್ನು ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡು ಮೋಸ ಮಾಡುವ ದಂಧೆಕೋರರ ಬಗ್ಗೆ ಪೊಲೀಸರು ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ. ಇಂತಹ ದಂಧೆಕೋರರಿಗೆ ಪೊಲೀಸರ್ಯಾಕೆ ಬೆಂಬಲವಾಗಿ ನಿಲ್ಲುತ್ತಿದ್ದಾರೋ ಗೊತ್ತಾಗುತ್ತಿಲ್ಲ.
ಇಂತಹ ದಂಧೆಕೋರರ ವಿರುದ್ಧ ಕೇಸು ದಾಖಲಿಸಬೇಕು. ಕೇಸುಗಳನ್ನು ಹಾಕಬೇಕು. ದಾರಿ ತಪ್ಪಿದವರನ್ನು ಸರಿ ಮಾಡಲು ಕಾನೂನು ಅಗತ್ಯವಿದೆ ಎಂದು ಚಂದ್ರಶೇಖರ್ ಕೋಡಿಹಳ್ಳಿ ಹೇಳಿದ್ದಾರೆ.
ಓದಿ : ಪದವಿ ಕಾಲೇಜುಗಳಲ್ಲಿ ಕಡ್ಡಾಯ ಕನ್ನಡ ಕಲಿಕೆ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್