ಗಂಗಾವತಿ: ಹಂಪಿ ಪ್ರಾಧಿಕಾರದ ನಿಯಮ ಮೀರಿಯೂ ಅನಧಿಕೃತವಾಗಿ ಹೋಟೆಲ್ ರೆಸಾರ್ಟ್ಗಳು ಕಾರ್ಯನಿರ್ವಹಿಸಿದ್ದ ಹಿನ್ನೆಲೆ ದಾಳಿ ಮಾಡಿದ ಪ್ರಾಧಿಕಾರದ ಅಧಿಕಾರಿಗಳು, ಹನ್ನೊಂದು ರೆಸಾರ್ಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೂಪಕ ಕುಮಾರ ಬಿಸ್ವಾಸ್, ರಾಜು , ವರುಣ್ , ಕರುಣಾಕರ್ , ಗಾಳೇಶ್ , ಆಸೀಫ್ , ಚಂದ್ರಶೇಖರಗೌಡ , ಶ್ರೀಕಾಂತ್ ಹೊಸಳ್ಳಿ, ರವಿಚಂದ್ರ, ಸಂದೀಪ್ ಶೇಟ್ ಹಾಗೂ ಮೌಲಾಲಿ ಎಂಬುವವರಿಗೆ ಸೇರಿದ ರೆಸಾರ್ಟ್ಗಳ ಮೇಲೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಪಿ. ಮಾರುತಿ ದೂರು ದಾಖಲಿಸಿದ್ದು, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ವಾಣಿಜ್ಯ ಚಟುವಟಿಕೆ, ರೆಸಾರ್ಟ್, ಹೋಟೆಲ್ ನಡೆಸದಂತೆ ಸೂಚನೆ ನೀಡಲಾಗಿತ್ತು. ಆದರೆ, ಪ್ರಾಧಿಕಾರದ ಆದೇಶ ಉಲ್ಲಂಘಿಸಿಯೂ ಈ ರೆಸಾರ್ಟ್ ಮಾಲೀಕರು ವಾಣಿಜ್ಯ ಚಟುವಟಿಕೆ ನಡೆಸುವ ಮೂಲಕ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಾಧಿಕಾರದ ಆಯುಕ್ತ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೂಜಾಟ ಪ್ರಮುಖರ ಬಂಧನ: ಬ್ಯಾಂಕಿನ ಆವರಣದಲ್ಲಿ ಕಾನೂನು ಬಾಹಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು, ಸಾಮಾಜದ ಪ್ರಮುಖರನ್ನು ಬಂಧಿಸಿದ ಘಟನೆ ನಡೆದಿದೆ. ಗಂಗಾವತಿ ತಾಲೂಕಿನ ಶ್ರೀರಾಮನಗರದ ಪ್ರಗತಿ ಗ್ರಾಮೀಣ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ ಆವರಣದ ಕಟ್ಟಡದ ಕೊಠಡಿಯೊಂದರಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ಪ್ರಮುಖರು, ಹಣಕಾಸು ಲೇವಾದೇವಿದಾರರು, ಪ್ರಮುಖ ವರ್ತಕರು, ವ್ಯಾಪಾರಿಗಳು, ನಾನಾ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಮುಖರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 50 ಸಾವಿರ ಮೊತ್ತದ ನಗದು ಮತ್ತು ಇಸ್ಪೀಟ್ ಜೂಜಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಹೊಸಕೇರಿ ದುರುಗಪ್ಪ ಕುರುಬರ ಹಾಗೂ ಇತರ ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಮೂರು ಗಂಟೆಯವರೆಗೂ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಲಾಗಿತ್ತು. ಈ ಸಂದರ್ಭದಲ್ಲಿ ನಾನಾ ರಾಜಕೀಯ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಆದರೆ ಒತ್ತಡಕ್ಕೆ ಮಣಿಯದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Dowry case: ₹30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಮದುವೆ ಮುಂದೂಡಿದ ವರ; ನೊಂದು ವಿಡಿಯೋ ಮಾಡಿಟ್ಟು ವಧು ಆತ್ಮಹತ್ಯೆ