ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕು ಆನೆಗೊಂದಿ ಉತ್ಸವದಲ್ಲಿ ಸಿಎಎ ವಿರುದ್ಧ ಕವನ ವಾಚನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಹಾಗೂ ಕವಿತೆಯನ್ನು ಯೂಟ್ಯೂಬ್ನಲ್ಲಿ ಪ್ರಸಾರ ಮಾಡಿದ ಆರೋಪಿ ರಾಜಾಭಕ್ಷಿ ಅವರು ಗಂಗಾವತಿ ನ್ಯಾಯಾಲಯದ ಮುಂದೆ ನಿನ್ನೆ (ಮಂಗಳವಾರ) ಹಾಜರಾದರು.
ನ್ಯಾಯಾಲಯ ಫೆಬ್ರವರಿ 19ರ ಮಧ್ಯಾಹ್ನ 2 ಗಂಟೆವರೆಗೆ ಪೊಲೀಸ್ ವಶಕ್ಕೆ ನೀಡಿದ್ದು, ಆಪಾದಿತರ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜನವರಿ 9ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸರಳ್ಳಿ ಅವರು 'ನಿನ್ನ ದಾಖಲೆ ಯಾವಾಗ ನೀಡುತ್ತೀ..?' ಎನ್ನುವ ಕವನ ಓದಿದ್ದರು. ಇದನ್ನು ಯೂಟ್ಯೂಬ್ ಚಾನೆಲ್ ಸಂಪಾದಕ ರಾಜಾಭಕ್ಷಿ ಅವರು ಪ್ರಸಾರ ಮಾಡಿದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಪೌರತ್ವ ಕಾಯ್ದೆ ವಿರೋಧಿ ಕವನ ವಾಚನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಗಂಗಾವತಿ ನಗರ ಮಂಡಲ ಕಾರ್ಯದರ್ಶಿ ಶಿವಕುಮಾರ್ ಎಂಬುವವರು ಸಿರಾಜ್ ಬಿಸರಳ್ಳಿ ಹಾಗೂ ರಾಜಾಭಕ್ಷಿ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಾದ ಬಳಿಕ ಸಿರಾಜ್ ಬಿಸರಳ್ಳಿ ಹಾಗೂ ರಾಜಾಭಕ್ಷಿ ತೆಲೆಮರೆಸಿಕೊಂಡಿದ್ದರು. ನಿನ್ನೆ ಗಂಗಾವತಿಯ ಜೆಎಮ್ಎಫ್ಸಿ ನ್ಯಾಯಾಲಯದ ಮುಂದೆ ಹಾಜರಾದರು. ಈ ವೇಳೆ ಜೆಎಮ್ಎಫ್ಸಿ ನ್ಯಾಯಾಮೂರ್ತಿ ಅವರು ಇಂದು (ಫೆ.19) ಮಧ್ಯಾಹ್ನ 2 ಗಂಟೆವರೆಗೂ ಪೊಲೀಸ್ ವಶಕ್ಕೆ ಸೂಚಿಸಿದರು.