ಗಂಗಾವತಿ: ಕೇವಲ ಪ್ರತಿಷ್ಠಿತ ಖಾಸಗಿ ಹಾಗೂ ದೊಡ್ಡ ಮಲ್ಟಿ ಸ್ಪೆಷಲ್ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದ್ದ ಪ್ಲಾಸ್ಮಾ ತೆರಫಿಯ ಪ್ರಯೋಗವೀಗ ಇದೇ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ಈ ಮೂಲಕ ರಾಜ್ಯಮಟ್ಟದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅದರಲ್ಲೂ ತಾಲೂಕು ಹಂತದ ಆಸ್ಪತ್ರೆಯಲ್ಲಿ ಪ್ಲಾಸ್ಮಾ ತೆರಫಿಗೆ ಯತ್ನಿಸಿದ ದಾಖಲೆಯನ್ನು ಇಲ್ಲಿನ ವೈದ್ಯರು ಮಾಡಿದ್ದಾರೆ.
ನಗರದ 65 ವರ್ಷದ ವೃದ್ಧರಿಗೆ ಸೋಂಕು ದೃಢಪಟ್ಟು ಕಳೆದ ಎಂಟು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವೃದ್ಧರಿಗೆ ಪ್ಲಾಸ್ಮಾ ತೆರಫಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಕೋವಿಡ್ನಿಂದ ಸಂಪೂರ್ಣ ಗುಣಮುಖರಾದ ನಾಲ್ವರು ವ್ಯಕ್ತಿಗಳಿಂದ ಪ್ಲಾಸ್ಮಾ ಸಂಗ್ರಹಿಸಲಾಗಿತ್ತು. ಹುಬ್ಬಳ್ಳಿಯಲ್ಲಿ ಸಂಗ್ರಹಿಸಲಾಗಿದ್ದ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ತಂದು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಆ ಪ್ಲಾಸ್ಮಾ ನೀಡಲಾಗಿದೆ.
ಸದ್ಯ "ವ್ಯಕ್ತಿ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ" ಎಂದು ಗಂಗಾವತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ತಿಳಿಸಿದ್ದಾರೆ.