ಗಂಗಾವತಿ: ನಗರ ಠಾಣೆಯ ಪೊಲೀಸ್ ಇನ್ಸ್ಪೆೆಕ್ಟರ್ ವೆಂಕಟಸ್ವಾಮಿ ಅನಗತ್ಯವಾಗಿ ನಗರಸಭೆಯ ಚುನಾವಣೆ ಮತ್ತು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಎಸ್ಪಿ ಕಚೇರಿ ಎದುರು ಧರಣಿ ನಡೆಸಲು ನಿರ್ಣಯ ಕೈಗೊಂಡಿದ್ದಾರೆ.
ಗಂಗಾವತಿ ನಗರಸಭೆಯ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಕೊಪ್ಪಳದ ಖಾಸಗಿ ಹೊಟೇಲ್ನಲ್ಲಿ ತಂಗಿದ್ದರು. ಈ ಹಿನ್ನೆಲೆ ಗಂಗಾವತಿ ಠಾಣೆಯ ಪಿಐ ವೆಂಕಟಸ್ವಾಮಿ, ಕೊಪ್ಪಳಕ್ಕೆ ಭೇಟಿ ನೀಡಿ ಸದಸ್ಯರು ತಂಗಿದ್ದ ಕೊಠಡಿಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್ ಸದಸ್ಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಬಿಜೆಪಿ ಶಾಸಕ ಹಾಗೂ ಸಂಸದರ ಮಾತು ಕೇಳಿ ಅಧಿಕಾರಿ ಅನಗತ್ಯ ತಮ್ಮ ವ್ಯಾಪ್ತಿ ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಲು ನಿರ್ಣಯ ಕೈಗೊಂಡರು. ಆದರೆ ಈ ಬಗ್ಗೆ ಅಧಿಕಾರಿಯ ಮೇಲೆ ಸೂಕ್ತ ಶಿಸ್ತುಕ್ರಮ ಕೈಗೊಂಡು ನಿಮಗೆ ಸೂಕ್ತ ರಕ್ಷಣೆ, ಬಂದೋಬಸ್ತ್ ಕಲ್ಪಿಸುವುದಾಗಿ ಎಸ್ಪಿ ಟಿ. ಶ್ರೀಧರ್ ಭರವಸೆ ನೀಡಿದ ಹಿನ್ನೆಲೆ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೂಚನೆ ಮೇರೆಗೆ ಧರಣಿ ಹಿಂಪಡೆದಿದ್ದೇವೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಾಮೀದ ಮನಿಯಾರ ತಿಳಿಸಿದ್ದಾರೆ.